ಮೂಡಲಗಿ:
ದೇಶದಲ್ಲಿ ಪ್ರಸ್ತುತ ಅಂಚೆ ಕಚೇರಿಯಲ್ಲಿ ನಿಷ್ಕ್ರಿಯ ಖಾತೆಗಳು ಮತ್ತು ವಾರಸುದಾರರಿಲ್ಲದ ಸುಮಾರು ರೂ. 25480 ಕೋಟಿ ಮೊತ್ತದ ಠೇವಣಿ ಇದ್ದು, ಇಲಾಖೆ ವತಿಯಿಂದ ಈಗಾಗಲೆ ಅರ್ಹ ವಾರಸುದಾರರನ್ನು ಗುರುತಿಸಿ ಮಾರ್ಚ್ 2023 ರಲ್ಲಿ 21 ಲಕ್ಷ ಖಾತೆದಾರರಿಗೆ 1240 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ 33.35 ಲಕ್ಷ ಖಾತೆಗಳಿಗೆ 1319.67 ಕೋಟಿ ರೂ ಜಮಾ ಮಾಡಲಾಗಿದೆ ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ದೇವುಸಿಂಹ ಚೌಹಾಣ್ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭೆಯ ಬಜೆಟ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ದೇಶದಾದ್ಯಂತ ಅಂಚೆ ಕಚೇರಿಗಳ ಸಂಖ್ಯೆ, ಈ ಅಂಚೆ ಕಚೇರಿಗಳಲ್ಲಿನ ಒಟ್ಟು ಉಳಿತಾಯ ಖಾತೆಗಳ ಸಂಖ್ಯೆ ಹಾಗೂ ನಿಷ್ಕ್ರಿಯ ಖಾತೆಗಳಲ್ಲಿನ ಠೇವಣಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯ ಅಂಚೆ ಕಚೇರಿಗಳು, ಉಪ ಅಂಚೆ ಕಛೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳು ಸೇರಿದಂತೆ ಒಟ್ಟು 1,49,478 ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಒಟ್ಟು 7.52 ಕೋಟಿ ಖಾತೆಗಳನ್ನು ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ 9658 ಅಂಚೆ ಕಚೇರಿಗಳಿದ್ದು 78.11 ಲಕ್ಷ ಖಾತೆಗಳನ್ನು ಹೊಂದಿದೆ ಎಂದರು.

ದೇಶದಾದ್ಯಂತ ಎಲ್ಲಾ ಅಂಚೆ ಕಚೇರಿಗಳನ್ನು ಗಣಕೀಕರಣಗೊಳಿಸಲಾಗಿದೆ. ಉಳಿತಾಯ ಖಾತೆದಾರರಿಗೆ ಎಟಿಎಂ, ಚೆಕ್‌ಬುಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಇ-ಪಾಸ್‌ಬುಕ್, ಎನ್. ಇ .ಎಫ್.ಟಿ ಮತ್ತು ಆರ್.ಟಿ.ಜಿ.ಎಸ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಗ್ರಾಮೀಣ ಡಾಕ್ ಸೇವಕರಿಗೆ 10 ಸಾವಿರದಿಂದ 35 ಸಾವಿರ ಡಿಎ ಭತ್ಯೆ, ಪಿಂಚಣಿ ಮತ್ತು ಆರೋಗ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ.