Join The Telegram | Join The WhatsApp |
ರುದ್ರಣ್ಣ ಚಂದರಗಿ ಅವರ ಪಕ್ಷ ನಿಷ್ಠೆ ಗುರುತಿಸಿ ಬಿಜೆಪಿ ಈ ಸಲ ಸವದತ್ತಿ ಅಥವಾ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು. ಈ ಮೂಲಕ ದಶಕಗಳಿಂದ ದುಡಿಯುತ್ತಿರುವ ಈ ಯುವ ನಾಯಕನನ್ನು ಗುರುತಿಸುವ ಕೆಲಸವಾಗಬೇಕು ಎನ್ನುವುದು ಕಾರ್ಯಕರ್ತರ ಬೇಡಿಕೆಯಾಗಿದೆ.
ಸವದತ್ತಿ :
ಸವದತ್ತಿ ವಿಧಾನಸಭಾ ಮತ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಕಟ್ಟಾ ಕಾರ್ಯಕರ್ತರಾದ ರುದ್ರಣ್ಣ ಚಂದರಗಿ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಜನತೆ ಹಾಗೂ ಕಾರ್ಯಕರ್ತರಿಂದ ಪ್ರಬಲವಾಗಿ ಕೇಳಿಬಂದಿದೆ.
ರುದ್ರಣ್ಣ ಚಂದರಗಿ ಅವರ ತಂದೆ ಸಿದ್ದಪ್ಪ ನಿಂಗಪ್ಪ ಚಂದರಗಿ ಅವರು ಸವದತ್ತಿ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರು. ಆಗ ಜಿಲ್ಲೆಯಲ್ಲಿ ಎಲ್ಲಿಯೂ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿರಲಿಲ್ಲ. ಅಂಥ ಕಾಲಘಟ್ಟದಲ್ಲಿ ಸಿದ್ದಪ್ಪ ಚಂದರಗಿ ಅವರು ಬಿಜೆಪಿಗಾಗಿ ದುಡಿದಿರುವುದು ಗತ ಇತಿಹಾಸ.
ಬಿಜೆಪಿಯಿಂದ ಕೇಂದ್ರ ಸಚಿವರಾಗಿ ಆಯ್ಕೆಯಾದ ಬಾಬಾಗೌಡ ಪಾಟೀಲ ಅವರ ಗೆಲುವಿಗೂ ಸಿದ್ಧಪ್ಪ ಚಂದರಗಿ ಅವರು ಅಹರ್ನಿಶಿ ಶ್ರಮಿಸಿದ್ದರು.
ಸುರೇಶ ಅಂಗಡಿ ಅವರು ಮೊದಲ ಬಾರಿಗೆ ಬೆಳಗಾವಿ ಸಂಸದರಾಗಿ ಆಯ್ಕೆಯಾಗಲು ಸಿದ್ಧಪ್ಪ ಚಂದರಗಿ ಹಾಗೂ ರುದ್ರಣ್ಣ ಚಂದರಗಿ ಅವರು 2004 ಸವದತ್ತಿ ತಾಲೂಕಿನಾದ್ಯಂತ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದರು.
ಆರಂಭದಲ್ಲಿ ಬಿಜೆಪಿಯ ಯುವಮೋರ್ಚಾ ಸಕ್ರಿಯ ಕಾರ್ಯಕರ್ತರಾಗಿ ಜಿಲ್ಲೆಯಾದ್ಯಂತ ಸಂಚಾರ ಕೈಗೊಂಡಿದ್ದರು.
ಪತ್ರಕರ್ತ, ಉದ್ಯಮಿಯಾಗಿ ಬೆಳಗಾವಿಯಲ್ಲಿ ಹೆಸರು ಮಾಡಿರುವ ರುದ್ರಣ್ಣ ಚಂದರಗಿ ಅವರು ಮೊದಲಿನಿಂದಲೂ ಬಿಜೆಪಿಗಾಗಿ ನಿಷ್ಠೆ ತೋರಿ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡವರು. ಹೀಗಾಗಿ ಅವರ ಪಕ್ಷ ನಿಷ್ಠೆಯನ್ನು ಬಿಜೆಪಿ ಈಗಲಾದರೂ ಗುರುತಿಸಬೇಕು ಎನ್ನುವುದು ಕಾರ್ಯಕರ್ತರ ಆಗ್ರಹವಾಗಿದೆ.
ಮೂಲತಃ ಸವದತ್ತಿ ತಾಲೂಕಿನ ಇಟ್ನಾಳ ಗ್ರಾಮದವರಾದ ರುದ್ರಣ್ಣ ಚಂದರಗಿ ಅವರು ಮೂರು ದಶಕಗಳ ಹಿಂದೆ ಬೆಳಗಾವಿಗೆ ಬಂದು ನೆಲೆಸಿದ್ದರೂ ಇಂದಿಗೂ ತಮ್ಮ ಮೂಲಸ್ಥಾನವಾದ ಸವದತ್ತಿ ತಾಲೂಕನ್ನು ಮಾತ್ರ ಮರೆತಿಲ್ಲ. ಇಂದಿಗೂ ಸವದತ್ತಿ ತಾಲೂಕಿನಲ್ಲಿ ಚಂದರಗಿ ಮನೆತನ ಅತ್ಯಂತ ಪ್ರತಿಷ್ಠಿತ ಮನೆತನ ಎನಿಸಿದ್ದು ಪ್ರಭಾವ ಹೊಂದಿದೆ.
ರುದ್ರಣ್ಣ ಚಂದರಗಿ ಅವರು ಸವದತ್ತಿ ತಾಲೂಕಿನಲ್ಲಿ ನಡೆಯುವ ಯಾವುದೇ ಧಾರ್ಮಿಕ, ಸಾಮಾಜಿಕ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ತಾಲೂಕಿನ ಜನತೆ ಜತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ. ಬಡಬಗ್ಗರಿಗೆ ಕಷ್ಟಕಾಲದಲ್ಲಿ ಸಹಾಯ ಹಸ್ತ ಚಾಚುತ್ತ ಬಂದಿದ್ದಾರೆ. ಜತೆಗೆ ಯುವಕ ಮಂಡಳಗಳಿಗೆ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಅಗತ್ಯವಾದ ನೆರವು ನೀಡುತ್ತಿದ್ದಾರೆ.
ಸಾಹಿತ್ಯಿಕ, ಕ್ರೀಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಂದಿಗೂ ನೆರವಾಗುತ್ತಿದ್ದಾರೆ.ರುದ್ರಣ್ಣ ಚಂದರಗಿ ಅವರು ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು, ಉದ್ಯಮಿಗಳು, ಜನ ಸಾಮಾನ್ಯರಿಗೆ ಚಿರಪರಿಚಿತರಾಗಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರಾಗಿ ಜಿಲ್ಲೆ ಹಾಗೂ ರಾಜ್ಯ ಮಟ್ಟದವರೆಗೂ ಅವರು ದುಡಿದಿದ್ದಾರೆ. ಇವೆಲ್ಲವನ್ನು ಗಮನಿಸಿ ಬಿಜೆಪಿ ಸವದತ್ತಿ ವಿಧಾನ ಸಭಾ ಮತಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ರುದ್ರಣ್ಣ ಚಂದರಗಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ಕಾರ್ಯಕರ್ತರ ಒಕ್ಕೊರಲ ಆಗ್ರಹವಾಗಿದೆ.
Join The Telegram | Join The WhatsApp |