ಅಂಕೋಲಾ : ತಾಲೂಕಿನ ಹನುಮಟ್ಟಾದ ಸುಪ್ರಸಿದ್ಧ ಶ್ರೀಲಕ್ಷ್ಮೀ ನಾರಾಯಣ ಮಹಾಮಾಯೆ ದೇವಾಲಯದಲ್ಲಿ ವಡೆ ಪಂಚಮಿ ಉತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ನಾಗ್ವೇ ಸಂಸ್ಥಾನದ ಶ್ರೀಲಕ್ಷ್ಮೀನಾರಾಯಣ ಮಹಾಮಾಯಾ ದೇವಾಲಯದಲ್ಲಿ ಪ್ರತಿ ವರ್ಷ ಆಶ್ವಿನ ಮಾಸದ ಕೃಷ್ಣ ಪಕ್ಷದ ವದ್ಯ ಪಂಚಮಿಯ ದಿನ ಎಣ್ಣೆ ಕಾವಲಿಯಿಂದ ವಡೆ ತೆಗೆಯುವ ಧಾರ್ಮಿಕ ಆಚರಣೆ ನಡೆಸಲಾಗುತ್ತದೆ.

 


ವಡೆ ಪಂಚಮಿ ಪ್ರಯುಕ್ತ ಮುಂಜಾನೆಯಿಂದಲೇ ಕುಳಾವಿ ಭಕ್ತರಿಂದ ವಿವಿಧ ಹರಕೆ ಸೇವೆಗಳು ಜರುಗಿವು. ಮದ್ಯಾಹ್ನ ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯೆ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ ನಂತರ ದೇವಾಲಯದ ಆವರಣದಲ್ಲಿ ಇರುವ ಶ್ರೀ ಭಗವತಿ ದೇವಾಲಯದಲ್ಲಿ ಕಾವಲಿಯಲ್ಲಿ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆಯುವ ಕಾರ್ಯಕ್ರಮ ನಡೆಯಿತು. ಗೋವಾ, ಮಹಾರಾಷ್ಟ್ರ, ರಾಜ್ಯದ ಉಡುಪಿ, ಮಂಗಳೂರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಕುಳಾವಿ ಭಕ್ತರು ಆಗಮಿಸಿ ದೇವರ ಸೇವೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಕ್ತರು ಪಾಲ್ಗೊಂಡು ದೇವರ ವಡೆ ಪ್ರಸಾದ ಸ್ವೀಕರಿಸಿದರು.