ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ ಹಣ ವರ್ಗಾಯಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿರುವ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.
ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ನಾಗೇಂದ್ರ ಜಾಮೀನು ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ಸತ್ರ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್‌ ಅವರು ಸೋಮವಾರ ಪ್ರಕಟಿಸಿದರು.

ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಜಾಮೀನು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲಾಗಿದೆ.

ನಾಗೇಂದ್ರ ಅವರು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಅನುಮತಿಯಿಲ್ಲದೇ ರಾಜ್ಯದಿಂದ ಹೊರಹೋಗುವಂತಿಲ್ಲ. ಯಾವುದೇ ರೀತಿಯಲ್ಲೂ ತನಿಖೆ ಮತ್ತು ಸಾಕ್ಷ್ಯ ತಿರುಚುವ ಕೃತ್ಯದಲ್ಲಿ ಭಾಗಿಯಾಗಬಾರದು. ಇಂಥದ್ದೇ ಬೇರೆ ಅಪರಾಧದಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಈ ಪ್ರಕರಣದಲ್ಲಿ ಸೆಪ್ಟೆಂಬರ್‌ 9ರಂದು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್‌ 3 ಮತ್ತು 4ರ ಅಡಿಯ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ 4,970 ಪುಟಗಳ ಆರೋಪ ಪಟ್ಟಿ ಹಾಗೂ 144 ಪುಟಗಳ ದೂರನ್ನು ಸಲ್ಲಿಸಿತ್ತು.

ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ ಮತ್ತು ನಾಗೇಂದ್ರ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ ವಾದಿಸಿದ್ದರು.

ನಿಗಮದ ಖಾತೆಯಿಂದ ಒಟ್ಟಾರೆ 84 ಕೋಟಿಯ ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ. ನಾಗೇಂದ್ರ ಸೂಚನೆಯಂತೆ ಪದ್ಮನಾಭ ಅವರಿಂದ ಹಣ ವರ್ಗಾವಣೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಒಳಸಂಚು ರೂಪಿಸಿದ್ದು, ಆನಂತರ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದು ನಾಗೇಂದ್ರ ವಿರುದ್ಧ ಆರೋಪಿಸಲಾಗಿದೆ.