ಇದು ಕೆಲ ದಶಕಗಳ ಹಿಂದೆ ನಡೆದ ಒಂದು ಸಂಗತಿ. ಅದನ್ನು ಇದ್ದದ್ದು ಇದ್ದಂತೆ ನಿಮ್ಮ ಮುಂದಿಡುತ್ತಿದ್ದೇನೆ. ಇದರಲ್ಲಿ ಯಾರದೂ ಕಿಮ್ಮತ್ತು ಕಡಿಮೆ ಅಥವಾ ಹೆಚ್ಚು ಮಾಡುವ ಉದ್ದೇಶ ನನಗಿಲ್ಲ. ನನಗೆ ಬೇಂದ್ರೆ ಕುವೆಂಪು ಇಬ್ಬರೂ ಸಮಾನರು, ಗೌರವಾನ್ವಿತರು. ಈ ಘಟನೆ ಬಗ್ಗೆ ೨೦೦೯ ರಲ್ಲಿ ಪ್ರಕಟವಾದ ಶ್ರೀ ವಿ. ಗ. ನಾಯಕರು ದೀನಬಂಧು ಪಾಂಡೇಶ್ವರ ಗಣಪತರಾವ್ ಅವರ ಬಗ್ಗೆ ಬರೆದ ಜೀವನ ಚರಿತ್ರೆಯಲ್ಲಿ ಹಾಕಿರುವ ವಿಷಯವನ್ನೇ ನಾನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಕೆಲವರು ಸಾಕ್ಷ್ಯಾಧಾರ ಕೇಳುತ್ತಾರಾದ್ದರಿಂದ ಆ ಎರಡು ಪುಟಗಳ ಪ್ರಿಂಟೌಟ್ ಪುಟದ ಫೋಟೋಪ್ರತಿ ನೀಡಿದ್ದೇನೆ.
೧೯೭೪ ರಲ್ಲಿ ನಡೆದ ಘಟನೆ ಇದು. ವರಕವಿ ಬೇಂದ್ರೆಯವರ ನಾಕುತಂತಿ ಗೆ ಜ್ಞಾನ ಪೀಠ ಪ್ರಶಸ್ತಿ ಬಂತು. ಬೇಂದ್ರೆಯವರಿಗೆ ಈ ಮನ್ನಣೆ ದೊರಕಿದ್ದಕ್ಕೆ ಎಲ್ಲರೂ ಸಂತೋಷ ಪಟ್ಟರು. ಆದರೆ ನಾಕುತಂತಿ ಕೃತಿಗೆ ಕೊಟ್ಟಿದ್ದಕ್ಕೆ ಕೆಲವರಿಗೆ ಸಮಾಧಾನವಾಗಿರಲಿಲ್ಲ. ಏಕೆಂದರೆ ಬಹಳಷ್ಟು ಜನರಿಗೆ ಅದರಲ್ಲಿನ ಕವನಗಳು ಅರ್ಥವಾಗಿರಲಿಲ್ಲ. ಅರ್ಥವೇ ಇಲ್ಲ ಎಂದೂ ಕೆಲವರ ಆಕ್ಷೇಪಣೆ
ಆ ಸಮಯದಲ್ಲಿ ಹಿರಿಯ ಪತ್ರಕರ್ತರೂ ಕವಿಗಳೂ ಆದ ಶ್ರೀ ಗಣಪತರಾವ್ ಪಾಂಡೇಶ್ವರ ಅವರು ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರಿಗೂ ಅಸಮಾಧಾನವಾಗಿತ್ತು ಮತ್ತು ಅವರದನ್ನು ಲೇಖನ ರೂಪದಲ್ಲಿ ಬರೆದು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು. ” ಜ್ಞಾನಪೀಠ ಪ್ರಶಸ್ತಿ ಬೇಂದ್ರೆಯವರಿಗೋ, ನಾಕುತಂತಿಗೋ ?” ಎನ್ನುವ ತಲೆಬರೆಹದ ಆ ಲೇಖನದಲ್ಲಿ ಪಾಂಡೇಶ್ವರರು ತಮ್ಮದೇ ಆದ ಕಟು ಶೈಲಿಯಲ್ಲಿ ಟೀಕಿಸಿ ಬರೆದಿದ್ದರು. ಅವರಿಗೆ ಬೇಂದ್ರೆಯವರ ಬಗ್ಗೆ ಅಪಾರ ಗೌರವ ಇತ್ತು. ಆದರೆ ನಾಕು ತಂತಿ ಬಗ್ಗೆ ಅತೃಪ್ತಿ ಇತ್ತು. ಆ ಲೇಖನ ಪ್ರಕಟಗೊಂಡ ಪತ್ರಿಕೆಯ ಪ್ರತಿಯನ್ನು ಅವರು ಕವಿ ಕುವೆಂಪು ಅವರಿಗೂ ಕಳಿಸಿದರು. ಕುವೆಂಪು ಅವರು ಅದನ್ನು ಓದಿ (೫-೧೨- ೧೯೭೪) ತಿರುಗಿ ಪಾಂಡೇಶ್ವರರಿಗೊಂದು ಪತ್ರ ಬರೆದರು ಮತ್ತು ಆ ಲೇಖನವನ್ನು ಮೆಚ್ಚಿ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಆ ಲೇಖನವು ಇತರ ಪತ್ರಿಕೆಗಳಲ್ಲೂ ಪ್ರಕಟವಾದರೆ ಒಳ್ಳೆಯದು. ಅದಕ್ಕಾಗಿ ಪ್ರಯತ್ನಿಸಿ” ಎಂದು ಸೂಚಿಸಿದರು.
ಕುವೆಂಪು ಅವರ ಈ ಪತ್ರದ ಧಾಟಿ ನಾಡಿನ ಖ್ಯಾತ ಚಿಂತಕ ಗೌರೀಶ ಕಾಯ್ಕಿಣಿ ಅವರಿಗೆ ಹಿಡಿಸಲಿಲ್ಲ. ಅವರು ಸಹಚರ ಎಂಬ ಇನ್ನೊಂದು ಪತ್ರಿಕೆಯಲ್ಲಿ ಈ ಬಗ್ಗೆ ಬರೆದು ” ಒಬ್ಬ ವರಕವಿ ಇನ್ನೊಬ್ಬ ವರಕವಿಯ ಬಗ್ಗೆ ವ್ಯವಹರಿಸುವ ಈ ಸದಾಚಾರ ಯಾವ ಮಾದರಿಯದೋ ! ” ಎಂದು ಪ್ರತಿಕ್ರಿಯಿಸಿದರು.
ಕಾಯ್ಕಿಣಿಯವರು ಎತ್ತಿದ ಈ ಪ್ರಶ್ನೆ ಅಪ್ರಸ್ತುತವೇನಲ್ಲ. ಕುವೆಂಪು ಬೇಂದ್ರೆ ಇಬ್ಬರೂ ಮಹಾಕವಿಗಳೇ. ಬರಗೂರ ರಾಮಚಂದ್ರಪ್ಪನವರು ಒಂದೆಡೆ ಹೇಳಿದಂತೆ ” ಕುವೆಂಪು ಮಹಾಕಾವ್ಯ ಬರೆದು ಮಹಾಕವಿಯಾದರೆ ಬೇಂದ್ರೆ ಮಹಾಕಾವ್ಯ ಬರೆಯದೆಯೂ ಮಹಾಕವಿ” ಈ ಮಾತನ್ನು ಅಲ್ಲಗಳೆಯಲಾಗದು. ಕುವೆಂಪು ಅವರು ಪಾಂಡೇಶ್ವರರ ಲೇಖನದ ಅಭಿಪ್ರಾಯ ಮೆಚ್ಚಿಕೊಂಡಿದ್ದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ಎಲ್ಲ ಪತ್ರಿಕೆಗಳಲ್ಲೂ ಬರುವಂತೆ ಮಾಡಿ ಎನ್ನುವ ವಾಕ್ಯ ಬೇಕಿರಲಿಲ್ಲ ಎಂಬ ಕಾಯ್ಕಿಣಿಯವರ ಅನಿಸಿಕೆಯನ್ನು ಸಹ ಒಪ್ಪಲೇಬೇಕಾಗುತ್ತದೆ.
ಇದು ಕೇವಲ ಕುವೆಂಪು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅಲ್ಲ. ಇಬ್ಬರೂ ಒಂದೇ ಎತ್ತರದ ಮಹಾಕವಿಗಳು. ನಾಡು ಅವರಿಬ್ಬರನ್ನೂ ಸಮಾನವಾಗಿ ಗೌರವಿಸುತ್ತದೆ. ಆದ್ದರಿಂದ ಅವರು ಪರಸ್ಪರರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಾಗಲೂ ಆ ಗೌರವಕ್ಕೆ ಧಕ್ಕೆಯುಂಟಾಗದಂತಿದ್ದರೆ ಒಳ್ಳೆಯದಲ್ಲವೇ ಎನ್ನುವದು ನಮ್ಮಂತಹ ಕಾವ್ಯಾಸಕ್ತರ ಅನಿಸಿಕೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ, ಕುವೆಂಪು ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಸಂತಸಪಟ್ಟ ಬೇಂದ್ರೆಯವರು ಕುವೆಂಪು ಅವರನ್ನು “ಯುಗದ ಕವಿ ಜಗದ ಕವಿ” ಎಂದು ಹಾಡಿಹೊಗಳಿದರು. ಕವಿ ನಿಜಕ್ಕೂ ದೊಡ್ಡವರೆನಿಸುವದು ಇಂತಹ ಸಂದರ್ಭಗಳಲ್ಲಿಯೇ ಅಲ್ಲವೆ.
– ಎಲ್. ಎಸ್. ಶಾಸ್ತ್ರಿ