ರಿಯೊ ಡಿ ಜನೈರೊ : ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಜಿ 20 ನಾಯಕರ ಶೃಂಗಸಭೆಯಲ್ಲಿ (G20 Leaders’ Summit) ಪಾಲ್ಗೊಳ್ಳಲು ಬ್ರೆಜಿಲ್(Brazil)ಗೆ ಆಗಮಿಸಿದ್ದಾರೆ.
ರಿಯೊ ಡಿ ಜನೈರೊಗೆ ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ಮೋದಿಗೆ ಬ್ರೆಜಿಲ್ ನಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ. ಬ್ರೆಜಿಲ್ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಿದೆ. ಜಿಲ್ ನ ವೇದ ವಿದ್ವಾಂಸರು ಪ್ರಧಾನಿ ಮೋದಿಯವರ ಮುಂದೆ ವೇದ ಮಂತ್ರಗಳನ್ನು ಪಠಿಸಿ ಸ್ವಾಗತ ನೀಡಿದ್ದು ವಿಶೇಷವಾಗಿತ್ತು. ಅವರು ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿನ ಹೋಟೆಲ್ಗೆ ಆಗಮಿಸುತ್ತಿದ್ದಂತೆ. ಅನಿವಾಸಿ ಭಾರತೀಯರು ಅವರನ್ನು ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ನೃತ್ಯದ ಮೂಲಕ ಸ್ವಾಗತಿಸಿದರು.
ಪ್ರಧಾನಿ ಮೋದಿಯವರು ಹೋಟೆಲ್ ನ್ಯಾಶನಲ್ಗೆ ಆಗಮಿಸಿದ ನಂತರ, ಗುಜರಾತಿ ಉಡುಗೆಯಲ್ಲಿ ನೃತ್ಯಗಾರರು ಪ್ರದರ್ಶಿಸಿದ ಸಾಂಪ್ರದಾಯಿಕ ದಾಂಡಿಯಾ ನೃತ್ಯ ಪ್ರದರ್ಶಿಸಿ ಅವರಿಗೆ ಆತ್ಮೀಯ ಸ್ವಾಗತ ನೀಡಿದರು. ಭಾರತೀಯ ಡಯಾಸ್ಪೊರಾ ಸದಸ್ಯರು ಅವರನ್ನು ಉಡುಗೊರೆಗಳೊಂದಿಗೆ ಸ್ವಾಗತಿಸಿದರು, ಭಾರತೀಯ ಧ್ವಜಗಳನ್ನು ಬೀಸಿದರು. ಎಲ್ಲಾ ವಯೋಮಾನದ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ವೇದ ವಿದ್ವಾಂಸರ ಗುಂಪು ಪ್ರಧಾನಿ ಮೋದಿಯವರ ಸಮ್ಮುಖದಲ್ಲಿವೇದ ಮಂತ್ರಗಳನ್ನು ಪಠಿಸಿದರು. ಅವರು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯ ಪ್ರಕಾರ, ಬ್ರೆಜಿಲ್ನಲ್ಲಿ ಭಾರತದ ಸಂಸ್ಕೃತಿ, ಧರ್ಮ, ಪ್ರದರ್ಶನ ಕಲೆಗಳು ಮತ್ತು ತತ್ವಶಾಸ್ತ್ರದಲ್ಲಿ ಗಮನಾರ್ಹ ಆಸಕ್ತಿ ಇದೆ. ರಾಮಕೃಷ್ಣ ಮಿಷನ್, ಇಸ್ಕಾನ್, ಸತ್ಯ ಸಾಯಿ ಬಾಬಾ ಸಂಸ್ಥೆಗಳು, ಮಹರ್ಷಿ ಮಹೇಶ ಯೋಗಿ, ಮತ್ತು ಭಕ್ತಿ ವೇದಾಂತ ಫೌಂಡೇಶನ್ನಂತಹ ಸಂಸ್ಥೆಗಳು ಬ್ರೆಜಿಲ್ನಲ್ಲಿ ಸಕ್ರಿಯವಾಗಿವೆ. ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯು ಬ್ರೆಜಿಲ್ನ ಮೇಲೆ ಪ್ರಭಾವ ಬೀರಿದ ಭಾರತೀಯ ಸಂಸ್ಕೃತಿಯ ಮೊದಲ ಅಂಶಗಳಲ್ಲಿ ಒಂದಾಗಿದೆ.ವೇದ ವಿದ್ವಾಂಸರು ತಮ್ಮ ಜೀವನದ ಮೇಲೆ ವೇದಗಳ ಪ್ರಭಾವದ ಬಗ್ಗೆ ಮಾತನಾಡಿದ್ದಾರೆ. “ನಾನು ಸುಮಾರು 10 ವರ್ಷಗಳ ಹಿಂದೆ ವೇದಾಧ್ಯಯನ ಪ್ರಾರಂಭಿಸಿದೆ, ಆ ಸಮಯದಲ್ಲಿ ನನಗೆ ಜೀವನದಲ್ಲಿ ಯಾವುದೇ ಆಸಕ್ತಿ ಉಳಿದಿರಲಿಲ್ಲ. ನಾನು ವೇದಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ನಾನು ನನ್ನನ್ನು ಅರಿತುಕೊಂಡೆ. ಈಗ ನಾನು ಸಂತೋಷವಾಗಿದ್ದೇನೆ” ಎಂದು ವೈದಿಕ ವಿದ್ವಾಂಸರಾದ ಜೆನಿಫರ್ ಸ್ಕೋಲ್ಸ್ ಹೇಳಿದ್ದಾರೆ.
ಆಚಾರ್ಯ ವಿಶ್ವನಾಥ ಎಂದೂ ಕರೆಯಲ್ಪಡುವ ವೈದಿಕ ವಿದ್ವಾಂಸ ಜೋನಾಸ್ ಮಾಸೆಟ್ಟಿ ಅವರು “ಬ್ರೆಜಿಲ್ನಲ್ಲಿ ಅನೇಕ ಜನರು ವೈದಿಕ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು ಮೊದಲ ಬಾರಿಗೆ ಮಂತ್ರಗಳನ್ನು ಕೇಳಿದಾಗ, ನಾನು ಬಹಳ ಸಂತೋಷ ಮತ್ತು ಸಮಾಧಾನವನ್ನು ಅನುಭವಿಸಿದೆ. ಅನೇಕ ವಿದ್ಯಾರ್ಥಿಗಳು ಸಂಸ್ಕೃತ, ಮಂತ್ರಗಳು, ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕಲಿಯುತ್ತಿದ್ದಾರೆ ಎಂದು ಹೇಳಿದರು.
ನವೆಂಬರ್ 18 ಮತ್ತು 19 ರಂದು ನಡೆಯಲಿರುವ 19 ನೇ G20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬ್ರೆಜಿಲ್ನಲ್ಲಿದ್ದಾರೆಇದಕ್ಕೂ ಸೋಮವಾರ ನೈಜೀರಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರವು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪುರಸ್ಕಾರ ಪ್ರದಾನ ಮಾಡಿದೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು (Bola Ahmed Tinubu) ಪುರಸ್ಕಾರ ಪ್ರದಾನ ಮಾಡಿದರು. ಮೋದಿ ಅವರು ಈ ಗೌರವ ಪಡೆದ ಎರಡನೇ ವಿದೇಶಿ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1969ರಲ್ಲಿ ಇಂಗ್ಲೆಂಡ್ನ ರಾಣಿ ಎಲಿಜಬೆತ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಪ್ರಶಸ್ತಿ ಸ್ವೀಕರಿಸಿದ ನಂತರ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ ಅವರು, ಈ ಗೌರವವನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸಿದ್ದಾರೆ.