ಬೆಂಗಳೂರು : ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರಕಾರ ಜಾತಿ ಗಣತಿ ನಡೆಸಬೇಕು ಎಂದು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸರಕಾರ ಸದ್ಯವೇ ಜಾತಿ ಗಣತಿ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ. ಕೆಲ ಸಮುದಾಯಗಳು ಜಾತಿ ಗಣತಿ ಪರವಾಗಿ ಇದ್ದರೆ ಕೆಲ ಸಮುದಾಯಗಳು ಜಾತಿಗಣತಿಯ ವಿರುದ್ಧವಾಗಿವೆ. ಇದೀಗ ರಾಜ್ಯದ ಪ್ರಬಲ ಸಮುದಾಯ ಎನಿಸಿಕೊಂಡಿರುವ ವೀರಶೈವ ಲಿಂಗಾಯತರು ಜಾತಿಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯದ ರಾಜಧಾನಿಯಲ್ಲಿ ಸಭೆ ಸೇರಿದ್ದ ವೀರಶೈವ ಲಿಂಗಾಯತ ನಾಯಕರು ರಾಜ್ಯ ಸರಕಾರಕ್ಕೆ ಅಗತ್ಯ ಸಲಹೆ ನೀಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಜಾತಿ ಗಣತಿಗೆ ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ.
ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಹಲವು ವೈರುದ್ಧ ಮತ್ತು ಲೋಪಗಳಿಂದ ಕೂಡಿದೆ. ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಒಕ್ಕೊರಲಿನಿಂದ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ದಶಕದ ಹಿಂದೆ ನಡೆಸಲಾದ
ಕಾಂತರಾಜು ವರದಿಯ ಸಾಧಕ-ಬಾಧಕಗಳ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಕೈಬಿಡಬೇಕೆಂದು ಮಹಾಸಭೆ ನಿರ್ಣಯಿಸಿದೆ.ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷಾ ಅಸಾಂವಿಧಾನಿಕ ಎಂದು ಮಹಾಸಭೆ ಅಭಿಪ್ರಾಯಪಟ್ಟಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಬಸವಾದಿ ತತ್ವಗಳನ್ನು ಪ್ರತಿಪಾದಿಸುತ್ತಿದೆ. ಸರ್ವರಿಗೂ ಲೇಸನ್ನೇ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿಗಣತಿಯ ವಿರೋಧಿಗಳೆಲ್ಲ ಎಂಬುದನ್ನುಈ ಸಂದರ್ಭದಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ. ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ (ಒಬಿಸಿ) ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿಗಳು ಶಿಫಾರಸು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಹಲವಾರು ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ “ಲಿಂಗಾಯತ” ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದುದರಿಂದ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯ ಸಿವಿಲ್ ಅಪೀಲ್ ನಂ. 7241/2021 ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಆಧಾರವಾಗಿರಿಸಿಕೊಂಡು, ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ “ಲಿಂಗಾಯತ” ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮಹಾಸಭಾ ಮನವಿ ಮಾಡಿದೆ.
ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಾನ್ಯ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕೆಂದು ಮಹಾಸಭೆಯು ಮನವಿ ಮಾಡಿದೆ.
ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ ಎಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಂತ್ರಿಗಳಾದ ಈಶ್ವರ್ ಖಂಡ್ರೆ, ಎಂ ಬಿ ಪಾಟೀಲ್, ಶರಣಬಸಪ್ಪ ದರ್ಶನಪುರ, ಶಿವಾನಂದ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ ಆರ್ ಪಾಟೀಲ್, ಸಂಸದರಾದ ಪಿಸಿ ಗದ್ದಿಗೌಡರ್, ಸಾಗರ್ ಖಂಡ್ರೆ, ಅಲ್ಲಂ ವೀರಭದ್ರಪ್ಪ, ಎಂ ವೈ ಪಾಟೀಲ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಹಂಪನಗೌಡ ಬಾದರ್ಲಿ, ಸಿ ಎಸ್ ನಾಡಗೌಡ ಸೇರಿದಂತೆ 55ಕ್ಕೂ ಹೆಚ್ಚು ಶಾಸಕರು ಮತ್ತು ಮಾಜಿ ಶಾಸಕರುಗಳು ಮಾಜಿ ಶಾಸಕರುಗಳು ಭಾಗವಹಿಸಿದ್ದರು.