ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು (ಶನಿವಾರ) ನಡೆಯಲಿದೆ. ಇದರ ಜೊತೆಗೆ ಕರ್ನಾಟಕದ ಸಂಡೂರು, ಚನ್ನ ಪಟ್ಟಣ ಮತ್ತು ಶಿಗ್ಗಾವಿ ಮತಕ್ಷೇತ್ರಗಳ ವಿಧಾನಸಭಾ ಮತಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ.
ಲೋಕಸಭಾ ಚುನಾವಣೆಯಲ್ಲಿ ಎದುರಿಸಿದ ಆಘಾತದಿಂದ ಬಿಜೆಪಿ ನೇತೃತ್ವದ ಎನ್ಡಿಎ ಚೇತರಿಸಿಕೊಳ್ಳಲಿದೆಯೇ ಅಥವಾ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲಿದೆಯೇ ಎಂಬುದು ಈ ಫಲಿತಾಂಶದಿಂದ ಗೊತ್ತಾಗಲಿದೆ.
ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭವಾಗಲಿದ್ದು, ಯಾವ ಪಾಳಯ ಸರಳ ಬಹುಮತದತ್ತ ಸಾಗುತ್ತಿದೆ ಎಂಬುದು ಮಧ್ಯಾಹ್ನದ ವೇಳೆಗೆ ಬಹುತೇಕ ನಿಚ್ಚಳವಾಗಲಿದೆ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಬುಧವಾರದಂದು (ನ.20) ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
ಮಹಾರಾಷ್ಟ್ರದಲ್ಲಿ ಸರ್ಕಾರದ ರಚನೆಗೆ 145 ಸದಸ್ಯರ ಅವಶ್ಯಕತೆ ಇದೆ.
ಮೂರು ಎಕ್ಸಿಟ್ ಪೋಲ್ಗಳ ಭವಿಷ್ಯವಾಣಿಯಂತೆ ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ)ಮತ್ತು ಎನ್ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಕೂಟವಾದ ಮಹಾಯುತಿ ಮತ್ತೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಜಾರ್ಖಂಡ್ನಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಜೆಎಂಎಂ-ಕಾಂಗ್ರೆಸ್ ಮೈತ್ರಿಯೊಂದಿಗೆ ನಿಕಟ ಪೈಪೋಟಿ ನಡೆಸಲಿದ್ದು, ಬಿಜೆಪಿಗೆ ಅಧಿಕಾರಕ್ಕೆ ಮರಳಲು ಹೆಚ್ಚೊ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ.
ಮೂರು ಎಕ್ಸಿಟ್ ಪೋಲ್ಗಳ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಸುಮಾರು 158 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಸರಳ ಬಹುಮತಕ್ಕೆ ಬೇಕಾದ 145 ಸ್ಥಾನಗಳನ್ನು ದಾಟಲಿದೆ ಎಂದು ತೋರಿಸಿದೆ. ಜಾರ್ಖಂಡ್ನಲ್ಲಿಯೂ ಸಹ, ಎಕ್ಸಿಟ್ ಪೋಲ್ಗಳ ಸಮೀಕ್ಷೆಗಳು ಬಿಜೆಪಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ ಬಗ್ಗೆ ಹೇಳಿದ್ದು, 81 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎನ್ಡಿಎ 45 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.ಆದಾಗ್ಯೂ, ಹಿಂದಿನ ಚುನಾವಣೆಗಳು ಎಕ್ಸಿಟ್ ಪೋಲ್ಗಳು ಆಗಾಗ್ಗೆ ತಪ್ಪಾಗುತ್ತವೆ ಎಂಬುದನ್ನು ತೋರಿಸಿವೆ. ಹೀಗಾಗಿ 23 ರಂದು ಮತ ಎಣಿಕೆ ನಡೆಯಲಿದ್ದು, ಆಗ ಎಕ್ಸಿಟ್ ಪೋಲ್ಗಳು ಎಷ್ಟು ನಿಖರ ಎಂಬುದು ಗೊತ್ತಾಗಲಿದೆ.
ಮಹಾರಾಷ್ಟ್ರದ ಎಕ್ಸಿಟ್ ಪೋಲ್ಗಳು
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ)ಮತ್ತು ಎನ್ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಕೂಟವಾದ ಮಹಾಯುತಿಯು 150-170 ಸ್ಥಾನಗಳ ನಡುವೆ ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ (ಶರದ್ ಪವಾರ್) ಒಳಗೊಂಡ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟವು 110–130 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ.
ಚಾಣಕ್ಯ ಸಮೀಕ್ಷೆಯು ಮಹಾಯುತಿ ಮೈತ್ರಿಕೂಟ 152 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು 130 ರಿಂದ 138 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ.ಟೈಮ್ಸ್ ನೌ-ಜೆವಿಸಿ ಎಕ್ಸಿಟ್ ಸಮೀಕ್ಷೆಯು ಮಹಾಯುತಿ ಮೈತ್ರಿಕೂಟವು ಸ್ಪಷ್ಟ ಜನಾದೇಶವನ್ನು ತೋರಿಸಿದೆ. ಮೈತ್ರಿಕೂಟ 159 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಎಂವಿಎ ಮೈತ್ರಿಕೂಟವು 116 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತೋರಿಸಿದೆ.
P-MARQ ಎಕ್ಸಿಟ್ ಪೋಲ್ ಪ್ರಕಾರ, ಮಹಾಯುತಿ 137-157 ಸ್ಥಾನಗಳನ್ನು ಪಡೆಯಬಹುದು, ಎಂವಿಎ 126-146 ಸ್ಥಾನಗಳು ಮತ್ತು ಇತರರಿಗೆ 2-8 ಸ್ಥಾನಗಳನ್ನು ಪಡೆಯಬಹುದು.
ದೈನಿಕ ಭಾಸ್ಕರ ಪ್ರಕಾರ, ಮಯಾಯುತಿ ಮೈತ್ರಿಕೂಟ 125-140 ಸ್ಥಾನಗಳನ್ನು ಗೆಲ್ಲಬಹುದು, ಮಹಾ ವಿಕಾಸ ಅಘಾಡಿ ಮೈತ್ರಿಕೂಟ 135-150 ಸ್ಥಾನಗಳನ್ನು ಗೆಲ್ಲಬಹುದು. ಹಾಗೂ ಇತರರು 20-25 ಸ್ಥಾನಗಳನ್ನು ಗೆಲ್ಲಬಹುದು.ಪೀಪಲ್ಸ್ ಪಲ್ಸ್ ಪ್ರಕಾರ, ಮಹಾಯುತಿ ಮೈತ್ರಿಕೂಟ 175-195 ಸ್ಥಾನಗಳನ್ನು ಗೆಲ್ಲಬಹುದು, ಎಂವಿಎ ಮೈತ್ರಿಕೂಟ 85-112 ಸ್ಥಾನಗಳನ್ನು ಗೆಲ್ಲಬಹುದು ಹಾಗೂ ಇತರರು 7-12 ಸ್ಥಾನಗಳನ್ನು ಗೆಲ್ಲಬಹುದು.
288 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಸರಳ ಬಹುಮತಕ್ಕೆ 145 ಸ್ಥಾನಗಳನ್ನು ಗೆಲ್ಲಬೇಕಾಗಿದೆ.ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 42-47 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇದು ಸರಳ ಬಹುತಕ್ಕೆ ಹೆಚ್ಚಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ 25-30 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಚಾಣಕ್ಯ ಎಕ್ಸಿಟ್ ಪೋಲ್ ಬಿಜೆಪಿ ನೇತೃತ್ವದ ಮೈತ್ರಿಕೂಟ ಜಾರ್ಖಂಡದ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಎನ್ಡಿಎ 45 ರಿಂದ 50 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ 35 ರಿಂದ 38 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತೋರಿಸಿದೆ.ಟೈಮ್ಸ್ ನೌ-ಜೆವಿಸಿ ಎಕ್ಸಿಟ್ ಪೋಲ್ ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆಯನ್ನು ತೋರಿಸಿದೆ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು 40ರಿಂದ 44 ಸ್ಥಾನಗಳನ್ನು ಗಳಿಸಲಿದೆ ಎಂದು ಮುನ್ಸೂಚನೆ ತೋರಿಸಿದೆ. ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ 30 ರಿಂದ 40 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಮೂರು ಎಕ್ಸಿಟ್ ಪೋಲ್ಗಳ ಸಮೀಕ್ಷೆಗಳು ಒಟ್ಟಾರೆಯಾಗಿ ಜಾರ್ಖಂಡ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ 45 ಸ್ಥಾನಗಳನ್ನು ಮತ್ತು ಜೆಎಂಎಂ-ಕಾಂಗ್ರೆಸ್ 33 ಸ್ಥಾನಗಳನ್ನು ಗೆಲ್ಲಬಹುದು ಎಂದು ತೋರಿಸಿದೆ.
ಪೀಪಲ್ಸ್ ಪಲ್ಸ್ ಪ್ರಕಾರ ಎನ್ಡಿಎ 44-53 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಇಂಡಿಯಾ ಮೈತ್ರಿಕೂಟ 25-37 ಸ್ಥಾನಗಳನ್ನು ಹಾಗೂ ಇತರರು 5-9 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ದೈನಿಕ್ ಭಾಸ್ಕರ ಎಕ್ಸಿಟ್ ಪೋಲ್ ಪ್ರಕಾರ, ಎನ್ಡಿಎ 37-40 ಸ್ಥಾನಗಳಲ್ಲಿ ಗೆಲ್ಲಬಹುದು, ಇಂಡಿಯಾ ಮೈತ್ರಿಕೂಟ 36-39 ಸ್ಥಾನಗಳಲ್ಲಿ ಗೆಲ್ಲಬಹುದು ಹಾಗೂ ಇತರರು
0-2 ಸ್ಥಾನಗಳಲ್ಲಿ ಗೆಲ್ಲಬಹುದು.
ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.