ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಪ್ರತಿನಿಧಿಯ ಆಯ್ಕೆಗಾಗಿ ನಡೆದ ಉಪ ಚುನಾವಣೆಯಲ್ಲಿ ಸೋಮವಾರ ಶೇ 97.91ರಷ್ಟು ಮತದಾನವಾಗಿದೆ.
ಈ ಉಪಚುನಾವಣೆಯಲ್ಲಿ ಉಭಯ ಜಿಲ್ಲೆಗಳ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ವಿಧಾನ ಸಭೆ, ವಿಧಾನ ಪರಿಷತ್ ಹಾಗೂ ಲೋಕಸಭಾ ಸದಸ್ಯರು ಸೇರಿ ಒಟ್ಟು 6,032 ಮತದಾರರಿದ್ದರು. ಅವರಲ್ಲಿ 5,906 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು.
ಮತದಾನ ಬಹಿಷ್ಕಾರ: ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಕಸ್ತೂರಿರಂಗನ್ ವರದಿಯ ಶಿಫಾರಸುಗಳ ಜಾರಿಯನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳು ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದವು. ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಅವರು ಈ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಏಳು ಗ್ರಾಮಗಳ ಪೈಕಿ ಬೈಂದೂರು ತಾಲ್ಲೂಕಿನ ಜಡ್ಕಲ್‌ನಲ್ಲಿ ಎಲ್ಲ 18 ಸದಸ್ಯರೂ ಮತದಾನವನ್ನು ಬಹಿಷ್ಕರಿಸಿದರು. ಉಳಿದ ಗ್ರಾಮಗಳಾದ ಜಡ್ಕಲ್, ಯಡಮೊಗೆ, ಚಿತ್ತೂರು, ಯಡೂರು- ಕುಂಞಾಡಿ, ಆಲೂರು ಹಾಗೂ ಕೆರಾಡಿ ಗ್ರಾಮಗಳ ಮತದಾರರಲ್ಲಿ ಕೆಲವರು ಹಕ್ಕು ಚಲಾಯಿಸಲಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಮತದಾನವನ್ನು ಬಹಿಷ್ಕರಿಸಿದ್ದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಮತದಾನ ಸಾಂಗವಾಗಿ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 1 ಗಂಟೆಯ ಒಳಗೆ ಶೇ 100ರಷ್ಟು ಮತದಾನವಾಗಿತ್ತು.