ಹಾವೇರಿ: ವಿಜಯಪುರ – ಮಂಗಳೂರು ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ರೈಲನ್ನು ಗದಗ ಜಿಲ್ಲೆಯ ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.ಈ ಕುರಿತು ಎಕ್ಸ್ ಮಾಡಿರುವ ಅವರು, ವಿಜಯಪುರ- ಮಂಗಳೂರು ರೈಲಿನ ಮೂಲಕ ಸಂಚರಿಸುವ ಪ್ರಯಾಣಿಕರಿಗೆಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಾದ ಶ್ರೀ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ.
ಬಂದರು ನಗರಿ ಮಂಗಳೂರು ನಗರಕ್ಕೆ ಈ ರೈಲು ನೇರ ಸಂಪರ್ಕವನ್ನು ಒದಗಿಸಲಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದು ಜನತೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ್ ಬೊಮ್ಮಾಯಿ ಮಾಡಿದ್ದ ಕೋರಿಕೆಗೆ ಸ್ಪಂದಿಸಿ ಯಲಿವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿದ ರೈಲ್ವೆ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದರು. ಯಲವಿಗಿ ರೈಲು ನಿಲ್ದಾಣದಲ್ಲಿ ವಿಜಯಪುರ – ಮಂಗಳೂರು ಎಕ್ಸ್ ಪ್ರೆಸ್ ರೈಲು ಪ್ರತಿದಿನ ರಾತ್ರಿ 9:49 ಗಂಟೆಗೆ ನಿಲುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಇತರೆ ಬೇಡಿಕೆಗಳು: ಜನಶತಾಬ್ಧಿ, ಯಶವಂತಪುರ – ವಾಸ್ಕೋ ಎಕ್ಸಪ್ರೆಸ್, ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಸಂಚರಿಸುವ ಅನೇಕ ರೈಲುಗಳು ಯಲವಗಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಬೊಮ್ಮಾಯಿ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.