ವಿಜಯಪುರ:
ಶತಮಾನದ ಸಂತ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಜನವರಿ 1 ಮತ್ತು 2 ರಂದು ಸಿದ್ದೇಶ್ವರ ಶ್ರೀಗಳ ಗುರು ನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.2 ರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗ ಗುರು ಅಮೃತಾನಂದ ಶ್ರೀಗಳು, ಸಿದ್ದೇಶ್ವರ ಶ್ರೀಗಳು ನಮ್ಮನ್ನು ಅಗಲಿ ಜನವರಿ 2 ಕ್ಕೆ ಒಂದು ವರ್ಷ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಜ.1 ಮತ್ತು 2 ರಂದು ಸಿದ್ದೇಶ್ವರ ಶ್ರೀಗಳ ಗುರು ನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ದೇಶ್ವರ ಶ್ರೀಗಳು ಏನೂ ಬೇಡವೆಂದು ಹೋದವರು. ಅವರ ಗದ್ದುಗೆ ಇಲ್ಲ, ಗುಡಿ ಇಲ್ಲ. ಸ್ಥಾವರ ನಿರಾಕರಿಸಿ, ಬಯಲ ಬೆಳಕಾದವರು. ಸಿದ್ದೇಶ್ವರ ಶ್ರೀಗಳಿಗೆ ದೀಪವೆಂದರೆ ಅಚ್ಚುಮೆಚ್ಚು. ಅದು ಜ್ಞಾನದ ಸಂಕೇತ ಎಂದು ಹೇಳುತ್ತಿದ್ದರು. ಹೀಗಾಗಿ ಅವರ ಆಶಯದಂತೆ ಜ.1ರ ಸಂಜೆ ಆಶ್ರಮದಲ್ಲಿ ದೀಪ ಬೆಳಗಲು ನಿಶ್ಚಯಿಸಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಆಹ್ವಾನ ನೀಡಲಾಗಿದ್ದು ಬಹುತೇಕ ಬರಲು ಒಪ್ಪಿಗೆ ನೀಡಿದ್ದಾರೆ. ಜ.2 ರ ಕಾರ್ಯಕ್ರಮದಲ್ಲಿ ಮೋದಿಯವರು ಗುರು ನಮನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದರು.