ಅಥಣಿ-

ರಾಜ್ಯ ಸಿವಿಲ್ ಕೋರ್ಟ್​​ನ ನ್ಯಾಯಾಧೀಶರ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ವಿಕಾಸ ದಳವಾಯಿ ಅವರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಇವರು ತಮ್ಮ 26ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕರ್ಲಟ್ಟಿಯಲ್ಲಿ, ಪ್ರೌಢ ಶಿಕ್ಷಣವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸದಲಗಾ, ಪದವಿ ಪೂರ್ವ ಶಿಕ್ಷಣವನ್ನು ಅಥಣಿಯ ಜೆಎ ಕಾಲೇಜಿನಲ್ಲಿ ಮುಗಿಸಿ ಆನಂತರ ಕಾನೂನು ಪದವಿಯನ್ನು ಬೆಳಗಾವಿಯ ರಾಜಾ ಲಖಮಗೌಡಾ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು 2021ರಲ್ಲಿ ಪಡೆದಿರುತ್ತಾರೆ. ನಂತರ ಬೆಳಗಾವಿಯಲ್ಲಿ ನ್ಯಾಯವಾದಿ ಎಜಿ ಕುಲಕರ್ಣಿ ಆಫೀಸಿನಲ್ಲಿ ಜೂನಿಯರ ನ್ಯಾಯವಾದಿಯಾಗಿ ವ್ರತ್ತಿಯನ್ನು ಆರಂಭಿಸಿ ಈಗ ಅಥಣಿಯ ನ್ಯಾಯವಾದಿ ಆರ್ ಎನ್ ಸಿದ್ಧಾಂತಿ ಆಫೀಸಿನಲ್ಲಿ ಜೂನಿಯರ  ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಕಾಸ ದಳವಾಯಿ ಅವರು ಗ್ರಾಮೀಣ ಭಾಗದ ರೈತನ ಮಗನಾಗಿದ್ದು ತಂದೆಯ ಆಸೆಯಂತೆ ಕಠಿಣ ಫರಿಶ್ರಮ, ಶ್ರದ್ಧೆಯಿಂದ ಅಧ್ಯಯನ ಮಾಡಿ ಈಗ ಸಿವಿಲ್ ನ್ಯಾಯಾಧೀಶ ಹುದ್ದೆಯ ಪರೀಕ್ಷೆಯಲ್ಲಿ ಪೂರ್ವ ಭಾವಿ, ಮುಖ್ಯ ಪರೀಕ್ಷೆ, ಸಂದರ್ಶನದಲ್ಲಿ ತೇರ್ಗಡೆಯಾಗಿ ಅಂತಿಮವಾಗಿ ನ್ಯಾಯಾಧೀಶರಾಗಿ ಆಯ್ಕೆ ಆಗಿದ್ದಾರೆ. ಇವರ ಈ ಸಾಧನೆಗೆ ಕುಟುಂಬಸ್ಥರು, ಗ್ರಾಮದವರು, ಅಥಣಿ ನ್ಯಾಯವಾದಿ ಸಂಘದ ಸದಸ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.