ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಗೌರಿಗದ್ದೆಯ ಅವದೂತ ಶ್ರೀ ವಿನಯ್ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ. ಹುಕ್ಕೇರಿಯಲ್ಲಿ ಶುಕ್ರವಾರದಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗುವುದಿಲ್ಲ. ಇದೇ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಭವಿಷ್ಯ ಎನ್ನುವುದಕ್ಕಿಂತ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ನಮ್ಮ ಆಶ್ರಮದ ಭಕ್ತರು, ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್ ಅವರು ಆ ಸ್ಥಾನದಲ್ಲಿ ಕುಳಿತರೆ ನಾವೆಲ್ಲ ಖುಷಿಪಡುತ್ತೇವೆ. ನಾವೆಲ್ಲರೂ ನೋಡಿದಂತೆ ಡಿ.ಕೆ. ಶಿವಕುಮಾರ್ ಅವರು ‘ನಾಟಕ ಇಲ್ಲದ ರಾಜಕಾರಣಿ’. ನಾಟಕ ಮಾಡಲು ಅವರಿಗೆ ಬರಲ್ಲ. ಇದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಕಷ್ಟಪಟ್ಟಿದ್ದಾರೆ, ಅದಕ್ಕಾಗಿ ದೇವರು ಅವರ ಕೆಲಸಕ್ಕೆ ಮನ್ನಣೆ, ಬೆಲೆ ನೀಡಲಿ ಎಂದು ವೈಕುಂಠ ಏಕಾದಶಿಯಂದು ನಾನು ದೇವರಲ್ಲಿ ಪ್ರಾರ್ಥಿಸುವೆ. ನಮಗೆಲ್ಲ ಆ ಬಗ್ಗೆ ನಂಬಿಕೆ ಇದೆ ಎಂದು ಹೇಳಿದರು.

ಅವರಿಗೆ ಅಜ್ಜಯನ ಮೇಲೆ ನಿಷ್ಠೆ, ಧರ್ಮಪೀಠ-ಧಾರ್ಮಿಕತೆ ಮೇಲೆ ಶ್ರದ್ಧೆ, ಗಾಂಧೀಜಿಯ ತತ್ವಗಳ ಮೇಲೆ ನಂಬಿಕೆ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಅವರ ದಕ್ಷತೆಗೆ ಭಗವಂತ ಅವರನ್ನು ಒಂದು ದಿನ ಆ ಸೀಟಿನ ಮೇಲೆ ಕುಳಿಸುತ್ತಾನೆ. ಈ ಸರಕಾರದ ಅವಧಿಯಲ್ಲಿ ಅವರು ಆ ಸ್ಥಾನದಲ್ಲಿ ಕೂರುತ್ತಾರೆ. ಗುರುಗಳ ದಯೆಯಿಂದ ಅವರು ಕೂರುತ್ತಾರೆ ಎನ್ನುವುದು ನನ್ನ ನಂಬಿಕೆ ಎಂದು ಅವರು ಪ್ರತಿಕ್ರಿಯೆ ನೀಡಿದರು.

2025 ರ ರಾಜಕೀಯ ಹೇಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜಕಾರಣ ಎನ್ನುವುದು ರಾಜಕೀಯ ವ್ಯಕ್ತಿಗಳ ಚಿಂತನೆ ಮೇಲೆ ಇರುತ್ತದೆ. ಗ್ರಹಗತಿಗಳ ಮೇಲೆ ಅವಲಂಬಿತ ಎನ್ನುವುದು ನಾನು ನಂಬುವುದಿಲ್ಲ ಎಂದು ಅವರು ಹೇಳಿದರು.