ಬೆಂಗಳೂರು: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಹಸ್ಯವಾಗಿ ಭೇಟಿಯಾಗಿರುವ ವಿಚಾರ ಸಂಚಲನಕ್ಕೆ ಕಾರಣವಾಗಿದ್ದರೆ ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಸಹಾ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಷಿಂಗ್ಟನ್‌ನಲ್ಲಿ ಮಂಗಳವಾರ ಭೇಟಿಯಾಗಿ ಚರ್ಚಿಸಿರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ.

ಡಿ.ಕೆ.ಶಿವಕುಮಾ‌ರ್ ಅವರ ಅಮೆರಿಕ ಪ್ರವಾಸ ವಿಚಾರ ಕೆಲ ದಿನಗಳಿಂದ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ರಾಹುಲ್ ಗಾಂಧಿ ಅವರು ಅಮೆರಿಕ ಪ್ರವಾಸದಲ್ಲಿರುವ ಹೊತ್ತಿನಲ್ಲೇ ಪ್ರವಾಸಕ್ಕೆ ಹೊರಟ ಬಗ್ಗೆಯೂ ಕಾಂಗ್ರೆಸ್‌ನಲ್ಲೇ ನಾನಾ ವಿಶ್ಲೇಷಣೆ ಕೇಳಿಬಂದಿತ್ತು.

ಆದರೆ ಎಲ್ಲ ರೀತಿ ಮಾತು, ವಿಶ್ಲೇಷಣೆಯನ್ನೂ ತಳ್ಳಿ ಹಾಕಿದ್ದ ಡಿ. ಕೆ.ಶಿವಕುಮಾ‌ರ್ ಅವರು ಕುಟುಂಬ ಸದಸ್ಯರೊಂದಿಗೆ ಖಾಸಗಿಯಾಗಿ ಕೈಗೊಂಡಿರುವ ಪ್ರವಾಸವಾಗಿದ್ದು, ಪ್ರವಾಸದ ವೇಳೆ ಯಾವುದೇ ನಾಯಕರನ್ನು ಭೇಟಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದ್ದರು. ಮುಡಾ ಹಗರಣ ಆರೋಪ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯತೆ ಕುರಿತಂತೆ ಪರ-ವಿರೋಧ ಚರ್ಚೆ ಹಾಗೂ ಕಾಂಗ್ರೆಸ್‌ನ ಸಿಎಂ ಆಕಾಂಕ್ಷಿಗಳು ಬಹಿರಂಗವಾಗಿ ಅಭಿಲಾಷೆ ವ್ಯಕ್ತಪಡಿಸಿರುವ ಹೊತ್ತಿನಲ್ಲೇ ಈ ಭೇಟಿ ಗಮನ ಸೆಳೆದಿದೆ.

ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರು ಅಮೆರಿಕದ ವಾಷಿಂಗ್ಟನ್‌ ನಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.