ಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್ ಮತ್ತು ವಿಟ್ಲ ಬ್ಲಾಕ್ ವ್ಯಾಪ್ತಿಗೊಳಪಡುವ ವ್ಯಾಪ್ತಿಯಲ್ಲಿ ಯಾರೆಲ್ಲಾ ನಿವೇಶನ ರಹಿತರಿದ್ದಾರೋ ಅವರಿಗೆಲ್ಲಾ ನಿವೇಶನ ಕೊಡಲು ನಾನು ಮೊದಲ ಆಧ್ಯತೆ ನೀಡಲಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಮಾಸಿಕ ಸಭೆಯಲ್ಲಿ ಮಾತನಾಡಿದರು.
ನಿವೇಶನವಿಲ್ಲದೆ ಅನೇಕ‌ಮಂದಿ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲೇ ಇದ್ದಾರೆ. ನಿವೇಶನ ಕೊಡಿ ಎಂದು ವಿಟ್ಲ ಪಟ್ಟಣ ಪಂಚಾಯತ್ ಗೆ ಅರ್ಜಿ ಹಾಕಿದ್ದಾರೆ. ಇದುವರೆಗೂ ಯಾರಿಗೂ ನಿವೇಶನ ಕೊಟ್ಟಿಲ್ಲ. ಖಂಡಿತವಾಗಿಯೂ ನಾನು ನಿವೇಶನ ಕೊಟ್ಟೇ ಕೊಡಿಸ್ತೇನೆ ಎಂದು ಹೇಳಿದರು.

ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ:
ಪಕ್ಷಕ್ಕೆ ಯಾವುದೇ ವ್ಯಕ್ತಿ ಮುಖ್ಯ ಎನಿಸುವುದಿಲ್ಲ, ಎಲ್ಲರಿಗೂ ಪಕ್ಷ ಮುಖ್ಯ. ಪಕ್ಷ ಇದ್ದರೆ ನಾವು ಇದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷಕ್ಕಾಗಿ, ಪಕ್ಷದ ಅಭಿವೃದ್ದಿಗಾಗಿ ಕೆಲಸ ಮಾಡಬೇಕು. ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ದಿ ಮಾಡಲು ಸಾಧ್ಯ, ಅನುದಾನ ತರಿಸಲು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ವಿಟ್ಲ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಬ್ಲಾಕ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನಾಸಿರ್ ಕೋಲ್ಪೆ, ರಾಮಣ್ಣ ಪಿಲಿಂಜ,ಶ್ರೀನಿವಾಸ ವಿಟ್ಲ, ಅಶ್ರಫ್ ವಿಟ್ಲ, ಮೂಸಾನ್ ಒಕ್ಕೆತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಜೂ.20 ರ ಬಳಿಕ ಪುತ್ತೂರಿಗೆ
500 ಮಂದಿ ಚಾಲಕ,ನಿರ್ವಾಹಕರ ನೇಮಕ: ಶಾಸಕ ಅಶೋಕ್ ರೈ
ಪುತ್ತೂರು: ಜೂ.20 ರ ಬಳಿಕ ಪುತ್ತೂರು ಕೆಎಸ್ ಆರ್ ಟಿಸಿಗೆ 500 ಮಂದಿ ಚಾಲಕ ಮತ್ತು ನಿರ್ವಾಹಕರನ್ನು ನೇಮಕ ಮಾಡಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದರು.
ವಿಟ್ಲ ಭಾಗಕ್ಕೆ ಸರಕಾರಿ ಬಸ್ಸುಗಳ ಕೊರತೆ ಇರುವ ಬಗ್ಗೆ ಪಕ್ಷದ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದಾಗ ಸ್ಪಷ್ಟನೆ ನೀಡಿದ ಶಾಸಕರು 500 ಮಂದಿ ನೇಮಕವಾದ ಬಳಿಕ ಎಲ್ಲೆಲ್ಲಾ ಬಸ್ಸುಗಳ ಓಡಾಟದ ಕೊರತೆ ಇದೆಯೋ ಅಲ್ಲೆಲ್ಲಾ ಬಸ್ಸುಗಳು ಬರಲಿದೆ. ಬಸ್ಸುಗಳ ಕೊರತೆ ಇಲ್ಲ ಚಾಲಕ ಮತ್ತು ನಿರ್ವಾಹಕರ ಕೊರತೆ ಇತ್ತು ಅದು ಜೂ.20 ಕ್ಕೆ ಪರಿಹಾರವಾಗಲಿದೆ ಎಂದು ಶಾಸಕರು ತಿಳಿಸಿದರು