ಕೌಜಲಗಿ: ದೇವಸ್ಥಾನ, ಮಠ ಮಂದಿರಗಳು ಧರ್ಮವನ್ನು ಭೋಧಿಸುತ್ತವೆ ಮತ್ತು ಧರ್ಮದಿಂದ ನಡೆಯಲು ಪ್ರೇರೆಪಿಸುತ್ತವೆ. ಸಮಾಜ ಅದನ್ನು ಅನುಸರಿಸುತ್ತದೆ. ವಿಧಾನಸಭೆ ಮತ್ತು ಲೋಕಸಭೆಗಳು ಸಂವಿಧಾನದ ಆಧಾರದಲ್ಲಿ ಸರ್ಕಾರಗಳು ನಡೆಯಲು ದಾರಿ ತೋರಿಸುತ್ತವೆ. ಚುನಾಯಿತ ಪ್ರತಿನಿಧಿಗಳು ಅದನ್ನು ಅನುಸರಿಸುತ್ತಾರೆ. ಧರ್ಮ ಮತ್ತು ಸಂವಿಧಾನ ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವುಗಳಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಸರಿದಾರಿಯಲಿ ನಡೆಯುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ನ-19 ರಂದು ಕೌಜಲಗಿ ಗ್ರಾಮದ ವಿಠ್ಠಲ ಬೀರದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದು ತದನಂತರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ವೇದಿಕೆಗಳಾಗಿದ್ದು, ಧಾರ್ಮಿಕ ಆಚರಣೆಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಲಭಿಸುತ್ತದೆ ಹೀಗಾಗಿ ಗ್ರಾಮದ ಪ್ರತಿಯೊಬ್ಬರು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದರು.
ಗ್ರಾಮದ ಜನರಿಗೆ ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಗ್ರಾಮದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಮುಖರಾದ ಸಿದ್ದಪ್ಪ ಹಳೂರ, ಎಂ.ಎನ್. ಶಿವನಮೂರಿ, ಯಲ್ಲಪ್ಪ ಸಣ್ಣಕ್ಕಿ, ಸಿದ್ದಪ್ಪ ಬಿಸಗುಪ್ಪಿ, ಬಸವರಾಜ ಲೋಕನ್ನವರ, ಶಿವಾನಂದ ಲೋಕನ್ನವರ, ಬಸಪ್ಪ ದಾನನ್ನವರ, ಈರಪ್ಪಣ್ಣ ಬಿಸಗುಪ್ಪಿ, ಶಿವಾನಂದ ದಾನನ್ನವರ, ಚಂದ್ರು ದೂಳಗಪ್ಪನ್ನವರ, ಹೊಳಿಬಸು ಯಲಿಗಾರ, ಜಗದೀಶ ದಳವಾಯಿ, ಶಿವಪ್ಪ ಸಂಗಟಿ, ಕಲ್ಲಪ್ಪ ಉಳಗದವರ ಸೇರಿದಂತೆ ಸ್ಥಳೀಯ ಮುಖಂಡರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.