Join The Telegram | Join The WhatsApp |
ಬೆಳಗಾವಿ :
ಯುವಕರು ಜೀವನದಲ್ಲಿ ಒಂದು ಗುರಿಯನ್ನು ಹೊಂದಿರಬೇಕು. ಸ್ಪಷ್ಟ ಗುರಿ ಹಾಗೂ ಸರಿಯಾದ ಉದ್ದೇಶವಿಲ್ಲದ ಯುವಕರು ಸಮಾಜಕ್ಕೆ ಅಪಾಯಕಾರಿ. ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಜಾತಿ ಅಡ್ಡಿಯಾಗಬಾರದು ಎಂದು ಮಂಗಳೂರಿನ ಲೇಖಕ ಆದರ್ಶ ಗೋಖಲೆ ಹೇಳಿದರು.
ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಅವಿಸ್ಮರಣೀಯ ಕ್ಷಣದ ನೆನಪು ಹಂಚಿಕೊಂಡರು. ಬೆಳಗಾವಿಯಲ್ಲಿ ವಿವೇಕಾನಂದರು ತಂಗಿದ್ದ ವಿಷಯವನ್ನು ಅವರು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ ಮಾತನಾಡಿ, ಸ್ವಾಮಿ ವಿವೇಕಾನಂದರನ್ನು ಜೀವನದುದ್ದಕ್ಕೂ ಸ್ಮರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಅವರನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬೇಡಿ ಎಂದು ಅವರು ಕಿವಿ ಮಾತು ಹೇಳಿದರು.
ಕಾಲೇಜಿನ ಸಾಂಸ್ಕೃತಿಕ ಮತ್ತು ಸಂಗೀತ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ನೇಹಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಶಿಲ್ಪಾ ರಾಯ್ಕರ್ ಸ್ವಾಗತಿಸಿದರು. ಚಾಣಕ್ಯ ಸೋಮಣ್ಣವರ ನಿರೂಪಿಸಿದರು. ಪವನ ಶಿರೋಳ್ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Join The Telegram | Join The WhatsApp |