ಬೆಳಗಾವಿ : ಭಾರತವನ್ನು ಜಗತ್ತು ನೋಡುವಂತೆ ಮಾಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಜಿಯವರು. ಅವರ ದಿಟ್ಟ ಹಾಗೂ ಪ್ರಖರವಾದ ಯೋಜನೆಗಳು, ದೇಶದ ಆರ್ಥಿಕತೆಯನ್ನು ಬದಲಾಯಿಸಿದೆ. ಭಾರತ ವಿಶ್ವ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಂತಹ ಪ್ರಧಾನಿ ಈ ದೇಶಕ್ಕೆ ಮತ್ತೊಮ್ಮೆ ಬೇಕು. ಅವರ ಆಡಳಿತದಲ್ಲಿ ಬೆಳಗಾವಿಯಿಂದ ಜಗದೀಶ ಶೆಟ್ಟರ್ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕಳುಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಆವರಣದ ಸಿಬ್ಬಂದಿ ವರ್ಗ ಹಾಗೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸಿಬ್ಬಂದಿ ವರ್ಗದವರನ್ನು ಭೇಟಿಯಾಗಿ ಶೆಟ್ಟರ್ ಅವರ ಪರವಾಗಿ ಮತ ಯಾಚಿಸಿದರು.
ಕೆಎಲ್ಇ ನೂರು ವರ್ಷಗಳ ತನ್ನ ಚರಿತ್ರೆಯಲ್ಲಿ ಘಟಾನುಘಟಿ ರಾಜಕಾರಣಿಗಳನ್ನು ಬೆಳೆಸಿದೆ. ಸಪ್ತರ್ಷಿಗಳು ಶಿಕ್ಷಕ ಮತಕ್ಷೇತ್ರವನ್ನು ಪ್ರತಿನಿಧಿಸಿ ಆರಿಸಿ ಬಂದಿದ್ದರು. ಇಂದು ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸಿದ್ದ ಶೆಟ್ಟರ್ ಅವರು ಸಂಸ್ಥೆಗಾಗಿ ಹಾಗೂ ನಾಡಿಗೆ ಬಹುಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಅಭಿವೃದ್ಧಿ ಕೆಲಸ ಕಾರ್ಯಗಳು ಇಂದಿಗೂ ಮಹತ್ವಪೂರ್ಣವೆನಿಸಿವೆಕೊಂಡಿವೆ. ಅವರು ನಮ್ಮವರು, ಎಲ್ಲಕ್ಕೂ ಮುಖ್ಯವಾಗಿ ಬೆಳಗಾವಿಯ ಅಭಿವೃದ್ಧಿಗಾಗಿ ದಶಕಗಳಿಂದ ಕೈಜೋಡಿಸುತ್ತಾ ಬಂದಿದ್ದಾರೆ. ಮೋದಿಜಿಯವರ ಸಮರ್ಥ ನೇತೃತ್ವದಲ್ಲಿ ಜರುಗಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತದಿಂದ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೆ ದೇಶ ಚಿತ್ರಣ ಬದಲಾಗುವುದರಲ್ಲಿ ಸಂದೇಹವಿಲ್ಲ. ದೇಶ ಇಂದು ಜಗತ್ತಿನ ಪ್ರಬಲ ಆರ್ಥಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ನಮ್ಮ ವೈರಿ ರಾಷ್ಟ್ರಗಳು ಭಾರತವನ್ನು ಕಂಡು ಹೆದುರುತ್ತಿವೆ. ಮೊದಲಿನ ಪರಿಸ್ಥಿತಿ ಇಂದಿಲ್ಲ. ಭಾರತ ತಲೆ ಎತ್ತಿ ನಿಂತಿದೆ. ಕಳೆದ ಒಂದು ದಶಕದಲ್ಲಿ ವಿಶ್ವದ ಪ್ರಬಲ ರಾಷ್ಟ್ರವಾಗಿ ರೂಪುಗೊಂಡಿದೆ. ಇದೆಲ್ಲ ಸಾಧ್ಯವಾದದ್ದು ನರೇಂದ್ರ ಮೋದಿಜಿಯವರಿಂದ ಎಂಬುದನ್ನು ಅರಿಯಬೇಕು. ಪ್ರಜ್ಞಾವಂತರಾದ ನಾವು ಮತದಾನವನ್ನು ಮಾಡಬೇಕು. ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನಿಮ್ಮ ಮತ ಜಗದೀಶ ಶೆಟ್ಟರ್ ಅವರಿಗೆ ಇರಲೆಂದು ಸಭಿಕರಿಗೆ ವಿನಂತಿಸಿಕೊಂಡರು.
ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ನಾನು ಕೆಎಲ್ಇ ವಿದ್ಯಾರ್ಥಿಯಾಗಿದ್ದು, ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ. ಬೆಳಗಾವಿಯೂ ನನಗೆ ಅಷ್ಟೆ ಮುಖ್ಯ. ಇದರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ದಕ್ಷಿಣ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗಿದೆ. ಅಧಿವೇಶನಕ್ಕೆ ಕೆಎಲ್ಇ ಕೊಡುಗೆ ಅನನ್ಯ. ಬೆಳಗಾವಿ ಅಭಿವೃದ್ಧಿ ನನ್ನ ಅಭಿಲಾಷೆ ಎಂದು ಹೇಳಿದರು.
ಸುವರ್ಣಸೌಧಕ್ಕೆ ಅನುಮತಿ ನೀಡಿ ಭೂಮಿಪೂಜೆ ಮಾಡಿದ್ದು ನಾನೆ. ಬೆಳಗಾವಿ ಜೊತೆ ನನ್ನದು ಅವಿನಾಭಾವ ಸಂಬಂಧ. ನಾನು ಹೊರಗಿನವರು ಎನ್ನಬೇಡಿ. ನನಗೂ ಅವಕಾಶ ಕೊಡಿ. ಬೆಳಗಾವಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. ಯಾವುದೇ ಕಾರಣಕ್ಜೂ ಬೆಳಗಾವಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವುದು, ರೇಲ್ವೆ ಹಾಗೂ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ಭಾರತ ವಿಶ್ಚದಲ್ಲಿಯೇ ಪ್ರಮುಖ ರಾಷ್ಟ್ರವಾಗಿ ಆರ್ಥಿಕತೆಯಲ್ಲಿ ಸಬಲತೆಯನ್ನು ಹೊಂದುತ್ತಿದೆ. ಅವರ ಯೋಜನೆಗಳು ದೇಶಕ್ಕೆ ಭದ್ರವಾದ ಬುನಾದಿಯನ್ನು ಹಾಕಿವೆ. ಅವರ ಹೆಸರು ಜನಮಾಸದಲ್ಲಿ ಬೆರೆತುಹೋಗಿದೆ. ಭ್ರಷ್ಟರಹಿತವಾಗಿ ಆಡಳಿತವನ್ನು ನಡೆಸಿದ್ದಾರೆ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ವ್ಯಕ್ತಿತ್ವ ಅವರದು. ಅಂತಹ ನಾಯಕ ಸಾರಥ್ಯದಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆಯುತ್ತಿದೆ. ನಾನೂ ಕೆಎಲ್ಇ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಕೆಎಲ್ಇ ಸಂಸ್ಥೆಯು ಅನೇಕ ರಾಷ್ಟ್ರ ನಾಯಕರನ್ನು ಬೆಳೆಸಿದೆ. ನಿಮ್ಮೆಲ್ಲ ಆಶೀರ್ವಾದ ನನ್ನ ಮೇಲೆ ಇರಲೆಂದು ಹೇಳಿದರು.
ಕೆಎಲ್ಇ ನಿರ್ದೇಶಕರು, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಕೆಎಲ್ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಕೆಎಲ್ಇ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.