ಬೆಳಗಾವಿ: ಜೈನ ಸಮುದಾಯ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಬೇಡಿಕೆ‌ ಈಡೇರದಿದ್ದರೆ ಸಲ್ಲೇಖನ ವೃತ ಕೈಗೊಳ್ಳುವುದಾಗಿ ರಾಷ್ಟ್ರ ಸಂತ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.

ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದ‌ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಸಮಾವೇಶದಿಂದ ಇನ್ನು ಮುಂದೆ ಸಿದ್ದರಾಮಯ್ಯ ನಿದ್ದೆಗೆ ಭಂಗ ತರುವುದು ಸಿದ್ಧ. ನಾವು ನಿಮಗೆ ಮತ ನೀಡಿದ್ದೇವೆ. ನೀವು ನಮಗೆ ಉಪಕಾರ ಮಾಡಿ, ನಮ್ಮ ಮಠಗಳಿಗೆ ಅನುದಾನ ಕೊಡಬೇಡಿ, ನಮ್ಮ ಜೈನ ಸಮುದಾಯ ಮಹಿಳೆಯರಿಗೆ ಸರ್ಕಾರ ವತಿಯಿಂದ ಶಿಖರಜೀ ಯಾತ್ರೆ ಹೋಗಲು ಯೋಜನೆ ಮಾಡಿ, ಜೈನ ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಜತೆಗೆ ಪ್ರಮುಖ ಏಳು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ ಎಂದರು.

ನಾವು ಚಿಕ್ಕೋಡಿಯಲ್ಲಿ ಲಕ್ಷಾಂತರ ಮಂದಿ ಇದ್ದೇವೆ. ಆದರೆ ಸರ್ಕಾರ ಜನಗಣತಿ ವರದಿಯಲ್ಲಿ ಒಂದೂವರೆ ಲಕ್ಷ ಜನ ಎಂದು ವರದಿ ನೀಡಿದೆ ಎಂದು ಜನಗಣತಿ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಜೈನ ಸಮುದಾಯದ ಅಭಿವೃದ್ಧಿಗೆ ಕೊಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಆಗುತ್ತಿತ್ತು ಆದರೆ ಸದ್ಯಕ್ಕೆ ಸರ್ಕಾರ ಅತಿ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದೆ. ಮುಂಬರುವ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಶ್ರೀಗಳು ಒತ್ತಾಯಿಸಿದರು.

ಹಲವು ಬೇಡಿಕೆಗಳ ಮನವಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ರಾಜ್ಯಪಾಲರು, ಜೈನ ಧರ್ಮ ವಿವಿಧತೆಯ ಮಹತ್ವ ಪೂರ್ಣ ಅಂಗವಾಗಿದೆ. ಇದರ ಪರಂಪರೆ, ಸಿದ್ದಾಂತ ಹಾಗೂ ಜೀವನ ದರ್ಶನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ.ಜೈನ ಧರ್ಮದ ಅನುಯಾಯಿಗಳು ಕಾಲಕಾಲಕ್ಕೆ ವಿಭಿನ್ನ ಸಮ್ಮೇಳನಗಳನ್ನು, ಧರ್ಮಸಭೆ, ಸಮಾರಂಭಗಳ ಮೂಲಕ ಅವರ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ. ಇದೇ ರೀತಿಯ ಯಶಸ್ವಿ ಸಮಾರಂಭವನ್ನು ಇಲ್ಲಿಯೂ ಆಯೋಜನೆ ಮಾಡಿದ್ದಾರೆ. ಜೈನ ಧರ್ಮ ಯಾವಾಗಲೂ ಸೇವೆಗೆ ಮೊದಲ ಆದ್ಯತೆ ನೀಡಿದೆ. ಅಗತ್ಯ ಅಸಹಾಯಕರಿಗೆ ಸಹಾಯ ಮಾಡುವುದು. ಗೋಶಾಲೆಗಳನ್ನು ನಿರ್ವಹಿಸುವುದು, ಶೈಕ್ಷಣಿಕ ಸಮಸ್ಯೆಗಳನ್ನು ಹೋಗಲಾಡಿಸುವುದು, ಆಸ್ಪತ್ರೆ ಹಾಗೂ ವೃದ್ಧಾಶ್ರಮದ ವ್ಯವಸ್ಥೆ ಮಾಡುವುದು ಹೀಗೆ ಇವೆಲ್ಲ ಜೈನ ಸಮಾಜದ ಸೇವಾ ಕಾರ್ಯಗಳ ವೈಖರಿಯಾಗಿದೆ ಎಂದರು.

ಜೈನ ಸಮುದಾಯ ಶಾಂತಿ ಪ್ರಿಯ, ಸಮಾಜ. ದೇಶದ ಹಾಗೂ ಜನ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಆರ್ಥಿಕತೆಯ ದೃಷ್ಟಿಯಿಂದಲೂ ದೇಶದ ಸಮೃದ್ಧತೆಯಲ್ಲಿ ಪಾಲ್ಗೊಳ್ಳುವ ಸಮುದಾಯವಾಗಿದೆ. ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆ, ಸಂವರ್ಧನೆಯ ಜತೆಗೆ ಶಿಕ್ಷಣ, ಆರೋಗ್ಯ ಹಾಗೂ ಸೇವೆಯ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ‌‌ ಎಂದರು.

ಎಲ್ಲ ಭಟ್ಟಾರಕ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಅಭಯ ಪಾಟೀಲ, ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ, ಮಾಜಿ ಸಚಿವರಾದ ಶ್ರೀಮಂತ ಪಾಟೀಲ, ವೀರಕುಮಾರ ಪಾಟೀಲ, ಮುಖಂಡ ಉತ್ತಮ ಪಾಟೀಲ ಇತರರಿದ್ದರು.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 30 ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಯಾವೊಬ್ಬ ಸಚಿವರೂ ಸಮಾವೇಶಕ್ಕೆ ಬಾರದಿರುವುದು ಜೈನ ಸಮುದಾಯದವರ ಅಸಮಾಧಾನಕ್ಕೆ ಕಾರಣವಾಯಿತು.