ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆ ಇದುವರೆಗೆ ಬಿಡುವು ಪಡೆದಿಲ್ಲ. ಬೆಳಗಾವಿಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ ಮಳೆ ತುಸು ವಿರಾಮ ಪಡೆದುಕೊಂಡಿತ್ತು. ಆದರೆ, ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದಿದೆ. ವ್ಯಾಪಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ಆಸ್ತಿಪಾಸ್ತಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.ಜಿಲ್ಲೆಯಲ್ಲಿ ಹರಿಯುತ್ತಿರುವ ನದಿ-ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಘಟಪ್ರಭೆ ತುಂಬಿ ಹರಿಯುತ್ತಿದ್ದು ಈಗ ಮೈತುಂಬಿಕೊಂಡಿದೆ. ಸುಣಧೋಳಿ ಮಠ ಸಂಪೂರ್ಣ ಜಲಾವೃತಗೊಂಡಿದೆ. ಮಟದ ಸ್ವಾಮೀಜಿಗಳು ಎತ್ತರದ ಸ್ಥಳದಲ್ಲಿರುವ ಕೋಣೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಮೂಡಲಗಿ ತಾಲೂಕು ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀ ದೇವಾಲಯ ಶುಕ್ರವಾರ ಸಂಪೂರ್ಣ ನೀರು ತುಂಬಿಕೊಂಡ ದೃಶ್ಯ ಕಂಡು ಬಂತು. ಶುಕ್ರವಾರ ದೇವಿಗೆ ವಿಶೇಷ ಪೂಜಾ ದಿನವಾಗಿದ್ದರಿಂದ ಭಕ್ತರು ತುಸು ದೂರದಲ್ಲೇ ನಿಂತು ಪ್ರಾರ್ಥಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಮಹಾಬಲೇಶ್ವರದಲ್ಲಿ 26.7 ಸೆಂಟಿಮೀಟರ್, ನವಜಾದಲ್ಲಿ 17.2 ಸೆಂಟಿ ಮೀ., ರಾಧಾನಗರಿಯಲ್ಲಿ 23.4 ಸೆಂಟಿಮೀಟರ್, ಸಾಂಗ್ಲಿಯಲ್ಲಿ 2.6 ಸೆಂಟಿಮೀಟರ್, ಕೊಲ್ಲಾಪುರದಲ್ಲಿ 10.4 ಸೆಂಟಿಮೀಟರ್ ಮಳೆಯಾಗಿದೆ. 105. 25 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೊಯ್ನಾ ಜಲಾಶಯದಲ್ಲಿ ಶುಕ್ರವಾರ 81.20 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆರು ಗೇಟ್ ಗಳ ಮೂಲಕ ನೀರು ಹರಿ ಬಿಡಲಾಗುತ್ತಿದೆ. ರಾಧಾ ನಗರಿ ಜಲಾಶಯದಿಂದ 10,000 ಕ್ಯುಸೆಕ್, ವಾರಣಾ ಜಲಾಶಯದಿಂದ 16,000 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದ ಹೆಚ್ಚಿನ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಸೇರಿದಂತೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.