ದೆಹಲಿ: ದೇವರ ಪವಾಡ ಎಂದರೆ ಹೀಗಿರಬಹುದು ಅಲ್ಲವೇ ? ಎಲ್ಲಿಯ ಅಮೆರಿಕ, ಎಲ್ಲಿಯ ಭಾರತ . ಅಮೆರಿಕ ಸಿರಿವಂತಿಕೆಯಲ್ಲಿ ಶ್ರೀಮಂತ ದೇಶವಾದರೆ ಭಾರತ ಆಧ್ಯಾತ್ಮಿಕವಾಗಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ದೇಶ.ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಕಿವಿ ಭಾಗಕ್ಕೆ ಗುಂಡು ತಗುಲಿದ್ದು, ರಕ್ತದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಾರ್ವಜನಿಕ ಸಭೆಯಲ್ಲಿಯೇ ಗುಂಡಿನ ದಾಳಿ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ. ಚುನಾವಣೆ ಹಿನ್ನೆಲೆ ಪೆನ್ಸಿಲ್ವೇನಿಯಾದಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ.ಡೊನಾಲ್ಡ್ ಟ್ರಂಪ್ ಪಕ್ಕದಿಂದಲೇ ಗುಂಡು ಹಾದು ಹೋಗಿರುವ ಫೋಟೋ ಹೊರ ಬಂದಿದೆ. ಆ ಕ್ಷಣದಲ್ಲಿ ಡೊನಾಲ್ಡ್ ಟ್ರಂಪ್ ಕೊಂಚ ತಿರುಗಿದ್ರೂ ಗುಂಡು ತಲೆ ಭಾಗಕ್ಕೆ ತಗುಲುತ್ತಿತ್ತು. ಕೂದಲೆಳೆ ಅಂತರದಿಂದ ಡೊನಾಲ್ಡ್ ಟ್ರಂಪ್ ಪ್ರಾಣ ಉಳಿದಿದೆ. ಡೊನಾಲ್ಡ್ ಟ್ರಂಪ್ ಜೀವ ಉಳಿಯಲು ದೇವರ ಕೃಪೆ ಎಂದು ಕೊಲ್ಕತ್ತಾದ ಇಸ್ಕಾನ್ ಅಧ್ಯಕ್ಷ ರಾಧಾರಮಣ ದಾಸ್ ಹೇಳಿದ್ದಾರೆ. ದೈವಿಕ ಅನುಗ್ರಹದಿಂದಲೇ ಡೊನಾಲ್ಡ್ ಟ್ರಂಪ್ ಉಳಿದಿದೆ ಎಂದು ರಾಧಾರಮಣ ದಾಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಟ್ರಂಪ್ ಸಹಾಯದಿಂದ ನಡೆದಿತ್ತು ಅಂದು ರಥಯಾತ್ರೆ!ಗುಂಡಿನ ದಾಳಿ ನಡೆದ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಧಾರಮಣ ದಾಸ್, 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಜಗನ್ನಾಥ ರಥಯಾತ್ರೆಯನ್ನು ಉಳಿಸಿದ್ದರು. ಇಂದು ಇಡೀ ಜಗತ್ತು ಜಗನ್ನಾಥ ರಥಯಾತ್ರೆಯನ್ನು ಆಚರಣೆ ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಗುಂಡಿನ ದಾಳಿಯಿಂದ ಜಗನ್ನಾಥ ಸ್ವಾಮಿ ಉಳಿಸಿದ್ದಾರೆ. ಈ ಮೂಲಕ ಜಗನ್ನಾಥ ಸ್ವಾಮಿ ತಮ್ಮ ಋಣವನ್ನು ತೀರಿಸಿದ್ದಾರೆ ಎಂದು ಹೇಳಿದ್ದಾರೆ. 1976 ರಲ್ಲಿ ರಥ ನಿರ್ಮಾಣಕ್ಕಾಗಿ ತಮ್ಮ ಟ್ರೈನ್ ಯಾರ್ಡ್ (ಮೈದಾನ) ಬಿಟ್ಟುಕೊಟ್ಟು ರಥಯಾತ್ರೆ ಆಯೋಜನೆ ಮಾಡಲು ಇಸ್ಕಾನ್ ಭಕ್ತರಿಗೆ ಸಹಾಯ ಮಾಡಿದ್ದರು. ಈ ಬಗ್ಗೆ ಅರ್ಚಕರು ಮಾಹಿತಿ ನೀಡಿದ್ದರು.
ಏನಿದು 1976ರ ಘಟನೆ?
ಇಂದು ಜಗತ್ತು 9ನೇ ದಿನದ ಜಗನ್ನಾಥ ರಥಯಾತ್ರೆ ಆಚರಿಸುತ್ತಿದೆ. ಇದೇ ದಿನದಂದು ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ನಡೆದಿದೆ. ಜಗನ್ನಾಥ ಸ್ವಾಮಿಯ ಕೃಪೆಯಿಂದಾಗಿ ಟ್ರಂಪ್ ಜೀವ ಉಳಿದಿದೆ. 1976 ರಲ್ಲಿ ಮೊದಲ ಬಾರಿಗೆ ಅಮೆರಿಕದ ರಸ್ತೆಯಲ್ಲಿ ಜಗನ್ನಾಥ ರಥಯಾತ್ರೆ ನಡೆದಿತ್ತು. ಅಂದು 30 ವರ್ಷದ ಡೊನಾಲ್ಡ್ ಟ್ರಂಪ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ರಥ ನಿರ್ಮಾಣಕ್ಕಾಗಿ ಡೊನಾಲ್ಡ್ ಟ್ರಂಪ್ ಮೈದಾನ ನೀಡುವ ಮೂಲಕ ಸಹಾಯ ಮಾಡಿದ್ದರು ಎಂದು ರಾಧಾರಮಣ ದಾಸ್ ಹೇಳುತ್ತಾರೆ.