
ಬೆಂಗಳೂರು: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು
ತಮ್ಮ ಪಕ್ಷದ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವ ಬೆನ್ನಲ್ಲೇ ಅವರು ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಜೊತೆ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ಇದೇ ವೇಳೆ ಅವರ ಜೊತೆ ಬ್ರಿಟನ್ ಕೈಗಾರಿಕಾ ಸಚಿವ ಜೋನಾಥನ್ ರಿನಾಲ್ಸ್ ಇದ್ದರು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರದ ಬಿಜೆಪಿಯ ಪ್ರಬಲ ನಾಯಕನ ಜೊತೆ ತಾವೇ ಸೆಲ್ಸಿ ತೆಗೆದುಕೊಂಡು ಆ ಚಿತ್ರವನ್ನು ತಮ್ಮ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತರೂರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಪರೋಕ್ಷವಾಗಿ ಸಂದೇಶ ರವಾನಿಸುತ್ತಿದ್ದಾರೆ ಎನ್ನಲಾಗಿದೆ.
ಬಹಳ ದಿನಗಳ ನಂತರ ಇಂಥಹ ಭೇಟಿ ಹಾಗೂ ಮಾತುಕತೆ ಸಾಧ್ಯವಾಯಿತು ಎಂದು ಅವರು ಬರೆದುಕೊಂಡಿದ್ದಾರೆ.
ಕೇರಳದ ಕಾಂಗ್ರೆಸ್ ಘಟಕದಲ್ಲಿ ನಾಯಕರ ಕೊರತೆ ಇದೆ. ಕಾಂಗ್ರೆಸ್ ಹೈಕಮಾಂಡ್ ತನ್ನ ಬಗ್ಗೆ ಹೊಂದಿರುವ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ತರೂರ್ ಅವರು ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು.
ತರೂರ್ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದ್ದರೂ ಕೇರಳದ ಕಾಂಗ್ರೆಸ್ ನಾಯಕರು, ಮೃದು ಧೋರಣೆ ತಾಳಿದ್ದಾರೆ ಎಂದು ತಿಳಿದು ಬಂದಿದೆ.
‘ಟೀಕೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಪಕ್ಷವು ಯಾರನ್ನೂ ಮೂಲೆಗುಂಪು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷವು ಟೀಕೆಗಳನ್ನು ಧನಾತ್ಮಕವಾಗಿ ಪರಿಗಣಿಸುತ್ತದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಕೇರಳ ಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಲ, ‘ಪಕ್ಷದ ವರಿಷ್ಠರನ್ನು ತರೂರ್ ಭೇಟಿಯಾಗುವ ಮುನ್ನವೇ ಸಂದರ್ಶನ ನಡೆದಿತ್ತು ಎಂದು ಹೇಳಿದರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ಅವರು, ‘ತರೂರ್ ಅವರು ತಮ್ಮ ಮಿತಿಯನ್ನು ಮೀರುವುದಿಲ್ಲ’ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಶಶಿ ತರೂರ್ ಅವರು ಪ್ರಸ್ತುತ ತಿರುವನಂತಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.