
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತೆಕ್ಕೆಗೆ ಸೇರಿದ್ದಾರೆ.
ಅಲ್ಲದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದ ಆರಂಭದಲ್ಲೇ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ಮಾಡಲಾಗದೇ ಭಾವುಕರಾಗಿರುವ ಘಟನೆ ನಡೆದಿದೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರನ್ ಅಪ್ ತೆಗೆದುಕೊಂಡ ಬಂದ ಸಿರಾಜ್ ಅರ್ಧಕ್ಕೆ ನಿಲ್ಲಿಸಿದರು. ಬಳಿಕ ಮತ್ತೆ ಬೌಲಿಂಗ್ ಆರಂಭಿಸಿದರು. ಈ ಎಸೆತವನ್ನು ವಿರಾಟ್ ಬೌಂಡರಿಗಟ್ಟಿದರು.
ಪಂದ್ಯದಲ್ಲಿ 19ಕ್ಕೆ ಮೂರು ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್, ಗುಜರಾತ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಸಿರಾಜ್, ‘ನಾನು ಸ್ವಲ್ಪ ಭಾವುಕನಾಗಿದ್ದೆ. ಏಳು ವರ್ಷಗಳ ಬಳಿಕ ನನ್ನ ಜೆರ್ಸಿಯನ್ನು ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಿಸಿದ್ದೇನೆ. ಆದರೆ ಒಮ್ಮೆ ಬೌಲಿಂಗ್ ಆರಂಭಿಸಿದಾಗ ಎಲ್ಲವೂ ಸರಿಯಾಯಿತು’ ಎಂದು ಹೇಳಿದರು.
ತಮ್ಮ ಟ್ರೇಡ್ ಮಾರ್ಕ್ ಸಂಭ್ರಮಾಚರಣೆಯ ಕುರಿತು ಪ್ರತಿಕ್ರಿಯಿಸಿದ ಸಿರಾಜ್, ‘ನಾನು ರೊನಾಲ್ಲೊ ಅಭಿಮಾನಿ. ಅದಕ್ಕಾಗಿಯೇ ಈ ರೀತಿಯಲ್ಲಿ ಸಂಭ್ರಮಿಸುತ್ತೇನೆ’ ಎಂದಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಬಿಡುವಿನ ವೇಳೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಹಾಗೂ ಫಿಟೈಸ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ನೆರವಾಗಿರುವುದಾಗಿ ಸಿರಾಜ್ ತಿಳಿಸಿದ್ದಾರೆ.
‘ನಾನು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದೆ. ಹಾಗಾಗಿ ಏನು ತಪ್ಪುಗಳನ್ನು ಮಾಡುತ್ತಿದ್ದೆ ಎಂಬುದರ ಮನವರಿಕೆ ಆಗುತ್ತಿರಲಿಲ್ಲ. ಬಿಡುವಿನ ವೇಳೆ ಬೌಲಿಂಗ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದೆ’ ಎಂದು ಹೇಳಿದ್ದಾರೆ.