ಮಂಗಳೂರು :
ಖ್ಯಾತ ನಟ ರಿಷಬ್ ಶೆಟ್ಟಿ ಮಂಗಳೂರು ಬಳಿಯ ವಜ್ರದೇಹಿ ಮಠದ ದೈವದ ಕೋಲದಲ್ಲಿ ಭಾಗಿಯಾಗಿದ್ದಾರೆ.

ಅವರು ಈ ಹಿಂದೆ ವಜ್ರದೇಹಿ ಮಠದ ಸ್ವಾಮೀಜಿಯವರನ್ನು ಭೇಟಿಯಾದಾಗ ಮಠದ ಮೈಸಂದಾಯ ದೈವಕೋಲ ವೀಕ್ಷಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿ ಅವರನ್ನು ಕೋಲಕ್ಕೆ ಆಹ್ವಾನಿಸಿದ್ದಾರೆ. ಆಗ ಮೈಸಂದಾಯ್ಯ ದೈವ ಅವರನ್ನು ಆಲಿಂಗಿಸಿ ಆಶೀರ್ವಾದ ನೀಡಿದೆ. ಆ ಸಂದರ್ಭದಲ್ಲಿ ದೈವ ರಿಷಬ್ ಶೆಟ್ಟಿ ಅವರನ್ನು ಆಲಿಂಗಿಸಿಕೊಂಡು ನೀನೇನು ಭಯಪಡಬೇಡ, ನಾನಿದ್ದೇನೆ ಎಂದು ಅಭಯ ನೀಡಿದೆ.

ಧೈರ್ಯ ಕಳೆದುಕೊಳ್ಳದಂತೆ ಸೂಚಿಸಿದ ದೈವ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ. ಹಿಂದೆ ನಾನಿದ್ದೇನೆ ಎಂದು ದೈವ ಸೂಚನೆ ನೀಡಿದೆ. ಕಾಂತಾರ ಶೂಟಿಂಗ್ ಸಂದರ್ಭದಲ್ಲೂ ಅವರಿಗೆ ದೈವದ ಅಭಯ ಸಿಕ್ಕಿತ್ತು. ಇದೀಗ ಕಾಂತಾರಾ ಚಾಪ್ಟರ್-1 ಸಂದರ್ಭದಲ್ಲಿ ದೈವ ಅವರಿಗೆ ಮತ್ತೆ ಅಭಯ ನೀಡಿದೆ.

ರಿಷಬ್ ಶೆಟ್ಟಿ ಅವರು ತಾವು ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ ಚಿತ್ರ ತೆರೆ ಮೇಲೆ ತರಲು ಚಿಂತನೆ ನಡೆಸಿದ್ದಾರೆ. ದೈವಾರಾಧನೆಯ ಅವಹೇಳನವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ದೈವಾರಾಧನೆಯ ಆಚರಣೆಗೆ ಯಾವುದೇ ರೀತಿಯಲ್ಲೂ ಧಕ್ಕೆ ಆಗಬಾರದು ಎನ್ನುವುದು ಅವರ ಕಳಕಳಿಯಾಗಿದೆ. ದೈವರಾಧನೆಯ ಕಟ್ಟುಪಾಡು, ಅಧ್ಯಯನ ಮಾಡಿಕೊಂಡೆ ದೈವದ ನೆಲೆಯನ್ನು ಅರಿತುಕೊಂಡೆ ಸಮಾಜಕ್ಕೆ ತೋರಿಸಬೇಕು ಎಂಬ ಇಚ್ಛೆ ಹೊಂದಿರುವ ರಿಷಬ್ ಶೆಟ್ಟಿ ಅವರು ಈ ಮಹತ್ವದ ಕೋಲಕ್ಕೆ ಆಗಮಿಸಿದ್ದಾರೆ.