ಬಾಗಲಕೋಟೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಿದ್ಯಾರ್ಥಿಗಳಿಂದ ದಂಡ ಕಟ್ಟಿಸಿಕೊಂಡು ನಂತರ ಅವರಿಗೆ ವಾಪಸ್ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ಸಂಚಾರಿ ನಿಯಮ ವೀಕ್ಷಣೆ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳು ಬೈಕ್ ಮೇಲೆ ಹೋಗುತ್ತಿದ್ದಾಗ ಮಹಿಳಾ ಪಿಎಸ್ಐ ಎಸ್ ಆರ್ ನಾಯಕ ಮತ್ತು ಸಿಬ್ಬಂದಿ ಅವರನ್ನು ತಡೆಗಟ್ಟಿ ದಂಡ ಹಾಕಿದ್ದಾರೆ. ಆಗ ಅವರನ್ನು ಅಲ್ಲೇ ವಿಚಾರಿಸಿದಾಗ ಅವರು ದಂಡ ಪಾವತಿಗೆ ಹಣವಿಲ್ಲದೆ ಇರುವ ವಿಷಯವನ್ನು ತಿಳಿಸಿದ್ದಾರೆ. ಕಾಲೇಜು ಫೀ ಪಾವತಿಗೆ ಇಟ್ಟುಕೊಂಡಿದ್ದ ಹಣ ನೀಡಿದ ವಿದ್ಯಾರ್ಥಿಗಳ ಪರಿಸ್ಥಿತಿಗೆ ಮರುಗಿದ ಎಸ್.ಆರ್.ನಾಯಕ ಅವರು ತಮ್ಮ ಜೇಬಿನಿಂದ ಹಣ ಕೊಟ್ಟಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಪಾಲಿಸುವಂತೆ ಬುದ್ದಿಮಾತು ಹೇಳಿದ್ದಾರೆ. ಒಟ್ಟಾರೆ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರ ಕರ್ತವ್ಯ ಹಾಗೂ ಅವರ ಮಾತುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.