ಬೆಳಗಾವಿ :
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ಸದಾಶಿವನಗರದ ರಮೇಶ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿದ ವಿಜಯೇಂದ್ರ ಅವರು ರಾಜ್ಯಾದ್ಯಂತ ಪಕ್ಷ ಸಂಘಟಿಸಲು ಸಹಕಾರ ನೀಡುವಂತೆ ಕೇಳಿಕೊಂಡರು.

ರಮೇಶ ಜಾರಕಿಹೊಳಿ ಅವರ ಭೇಟಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಮಾನ್ಯ ಜಾರಕಿಹೊಳಿ ಅವರ ನಡೆ ಹಲವಾರು ರೀತಿಯಲ್ಲಿ ಅಗಾಗ ಚರ್ಚೆಗೊಳಗಾಗುತ್ತಿದೆ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಜವಾಬ್ದಾರಿಯಾಗಿದೆ. ಈ ಮಾತನ್ನು ನಾನು ಪದೇ ಪದೇ ಹೇಳುತ್ತಿದ್ದೇನೆ. ಜಾರಕಿಹೊಳಿಯವರು ತಮ್ಮ ನೋವನ್ನು ಇಂದಿನ ಭೇಟಿಯ 30 ನಿಮಿಷಗಳ ವೇಳೆ ತೋಡಿಕೊಂಡಿದ್ದಾರೆ. ಆದರೆ, ರಾಷ್ಟ್ರೀಯ ನಾಯಕರು ನನಗೆ ಜವಾಬ್ದಾರಿ ನೀಡಿ ಪಕ್ಷ ಕಟ್ಟಲು ಹೇಳಿರುವುದನ್ನು ಅವರಿಗೆ ವಿವರಿಸಿದೆ.

ಜಾರಕಿಹೊಳಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುವ ಭರವಸೆ ನೀಡಿರುವುದಾಗಿ ವಿಜಯೇಂದ್ರ ಸ್ಪಷ್ಟಪಡಿಸಿದರು.

ತಮ್ಮ ಸಣ್ಣ ಪುಟ್ಟ ನೋವು, ಅಸಮಾಧಾನಗಳನ್ನು ಜಾರಕಿಹೊಳಿ ಅವರು ಹೇಳಿಕೊಂಡಿದ್ದಾರೆ‌. ವರಿಷ್ಠರಿಗೆ ಸಂಬಂಧಿಸಿದ ಅಭಿಪ್ರಾಯಗಳನ್ನು ಹೇಳಿದ್ದಾರೆ. ನಾನು ಹೇಳಿದ ಮಾತುಗಳಿಂದ ಅವರಿಗೆ ಸಮಾಧಾನವಾಗಿದೆ ಎಂದುಕೊಂಡಿದ್ದೇನೆ ಎಂದರು.

ವಿಜಯೇಂದ್ರ-ಅಶೋಕ ಹೊಂದಾಣಿಕೆ ರಾಜಕಾರಣ ಮಾಡುವ ಕಾರಣಕ್ಕೆ ಅವರಿಗೆ ಸ್ಥಾನ ಸಿಕ್ಕಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ಪ್ರತಿಕ್ರಿಯಸಲು ಬಯಸದ ವಿಜಯೇಂದ್ರ, ಪಕ್ಷದ ಹಿರಿಯರು ತಮ್ಮ ಭಾವನೆಗಳನ್ನು ಅವರದೇ ಧಾಟಿಯಲ್ಲಿ ಹೇಳುತ್ತಾರೆ. ಮಾತನಾಡುವುದೇ ಕೆಲಸವಲ್ಲ, ಕೆಲಸ ಮಾಡಿ ತೋರಿಸಬೇಕು ಎಂಬುದು ತಮ್ಮ ನಿಲುವು. ಎಲ್ಲರನ್ನೂ ಒಗ್ಗೂಡಿಸಿ ವರಿಷ್ಠರು ವಹಿಸಿದ ಕೆಲಸವನ್ನಷ್ಟೇ ಮಾಡುವುದು ತಮ್ಮ ಆದ್ಯತೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಬಿ.ವೈ.ವಿಜಯೇಂದ್ರ ಅವರು ಇದೀಗ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಪಕ್ಷ ಸಂಘಟನೆಗೆ ಮುಂದಾಗುತ್ತಿರುವುದು ಮುಂದಿನ ದಿನಗಳಲ್ಲಿ ಯಾವ ರೀತಿ ಫಲ ನೀಡುತ್ತದೆ ಕಾದುನೋಡಬೇಕಿದೆ.