ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಒಟ್ಟು 8.52 ಲಕ್ಷ ಕುಟುಂಬಗಳ ಪೈಕಿ 7.43 ಲಕ್ಷ (ಶೇ 87.13%) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಮಳೆಗಾಲ ಅಧಿವೇಶದಲ್ಲಿ ಜಲ ಜೀವನ್ ಮಿಷನ್‌ನ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು 2019ರಲ್ಲಿ ಜೆಜೆಎಂ ಅಭಿಯಾನವನ್ನು ಆರಂಭಿಸಿದಾಗ, ಜಿಲ್ಲೆಯ ಗ್ರಾಮೀಣ ಭಾಗದ 1.92 ಲಕ್ಷ (ಶೇ.22.53) ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕಗಳನ್ನು ಹೊಂದಿದ್ದವು. ಜೆಜೆಎಂ ಯೋಜನೆಯ ಪರಿಣಾಮವಾಗಿ 5.51 ಲಕ್ಷ ಮನೆಗಳು ನಲ್ಲಿ ಸಂಪರ್ಕ ಪಡೆದುಕೊಂಡಿವೆ.
ದೇಶದ 19.32 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ, ಸುಮಾರು 15.03 ಕೋಟಿ (77.81%) ಕುಟುಂಬಗಳು ತಮ್ಮ ಮನೆಗಳಲ್ಲಿ ನಲ್ಲಿ ಮೂಲಕ ನೀರು ಸರಬರಾಜನ್ನು ಹೊಂದಿವೆ. ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಯ ಗುಣಮಟ್ಟವನ್ನು ಸುಧಾರಿಸಲು 5 ವರ್ಷಗಳ ಗ್ರಾಮ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ. ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನೀರಿನ ಗುಣಮಟ್ಟ ಪರೀಕ್ಷೆಯನ್ನು ಉತ್ತೇಜಿಸಲು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನೀರಿನ ಮಾದರಿಗಳನ್ನು ಸಾಮಾನ್ಯ ಜನರಿಂದ ಪರೀಕ್ಷಿಸಲು ಅತ್ಯಲ್ಪ ದರದಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ತೆರೆದಿವೆ ಎಂದು ಸಚಿವರು ಉತ್ತರಿಸಿದ್ದಾರೆಂದು ತಿಳಿಸಿದ್ದಾರೆ