ಭಟ್ಕಳ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಇದ್ದ ವೇಳೆ ದೇಶದಲ್ಲಿ ಹಲವೆಡೆ ಬಾಂಬ್ ಬ್ಲಾಸ್ಟ್ ಪ್ರಕರಣಗಳು ನಡೆದಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಎನ್ನುವ ಶಬ್ದ ಕೇಳುವುದಕ್ಕೆ ಸಿಗುತ್ತಿಲ್ಲ. ಇದಕ್ಕೆ ನಾನು ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಇಲ್ಲಿನ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನಡೆದ “ನಮೋ ಭಾರತ- ಈಗ ಶುರುವಾಗಿದೆ ಭಾರತದ ಕಾಲ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ನರೇಂದ್ರ ಮೋದಿಯವರ ಸಾಧನೆಯನ್ನು ವಿವರಿಸಿ ಮೋದಿಯೇ ಏಕೆ ಬೇಕು ಮತ್ತು ಕಾಂಗ್ರೆಸ್ ಪಕ್ಷ ಏಕೆ ತಿರಸ್ಕರಿಸಬೇಕು ಎಂಬುದರ ಕುರಿತಂತೆ ಮಾತನಾಡಿದರು.

ಕಾಂಗ್ರೆಸ್ ಪಕ್ಷದವರು ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನು
ನಮ್ಮ ಬ್ರದರ್ಸ್ ಎಂದು ಕರೆಯುತ್ತಾರೆ. ಬಾಂಬ್ ಬ್ಲಾಸ್ಟ್ ಮಾಡಿ ದುಷ್ಕೃತ್ಯ ಮಾಡುವರನ್ನು ರಕ್ಷಣೆ ಮಾಡಿ ಉಳಿಸುವ ಪ್ರಯತ್ನ ಮಾಡುತ್ತಾರೆ. ಆಗ ಸಹಜವಾಗಿಯೇ ಬಾಂಬ್ ಬ್ಲಾಸ್ಟ್ ಮಾಡಿ ಕರ್ನಾಟಕದಲ್ಲಿ ಇದ್ದರೆ ನನ್ನನು ಉಳಿಸುವವರು ಬೇಕಾದಷ್ಟು ಜನರಿದ್ದಾರೆ ಎಂಬ ಧೈರ್ಯ ಬರುತ್ತದೆ. ಬಾಂಬ್ ಬ್ಲಾಸ್ ಪ್ರಕರಣದಲ್ಲಿ ಎನ್ಐಎ ಪ್ರಕರಣ ಕೈಗೆತ್ತಿಕೊಂಡ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ತಂದು ನಿಲ್ಲಿಸಿದ್ದಾರೆ. ಅದು ಹೊಸ ಭಾರತ. ಇಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದರು.

ಗಲಾಟೆ ನಡೆಸುವುದು ಒಂಥರ ಸಹಜವಾದ ಪ್ರಕ್ರಿಯೆ. ಸ್ವಾತಂತ್ರ್ಯ ಬಂದ ಹೊತ್ತಿನಿಂದಲೂ ಇಡೀ ಭಾರತದಲ್ಲಿ ಗಲಾಟೆ ನಡೆಯುತ್ತಿತ್ತು. ಅದು ಬಳಿಕ ಎಲ್ಲಿ ಬಂದು ನಿಂತಿತು ಅಂದರೆ ಹಿಂದೂಗಳಿಗೆ ಪ್ರತ್ಯೇಕ ಹಿಂದೂಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎನ್ನುವ ತನಕ ಹೋಯಿತು. ಆ ವೇಳೆ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರು ಮುಸ್ಲಿಮರಿಗೆ ಪ್ರತ್ಯೇಕ ಪಾಕಿಸ್ತಾನ ಇರಬಹುದು. ಆದರೆ ಹಿಂದೂಗಳಿಗೆ ಪ್ರತ್ಯೇಕ ಅಂತ ಬೇಡ. ಯಾವ ಯಾವ ಮುಸ್ಲಿಮರಿಗೆ ಭಾರತ ಅಂದರೆ ಪ್ರೀತಿ ಇದ್ಯೋ ಅವರು ಭಾರತದಲ್ಲಿ ಇರಬಹುದು ಎಂದು ಹೇಳಿದರು. ಆದರೆ ಸರ್ದಾರ್ ಪಟೇಲ್ ತುಂಬಾ ವಿರೋಧಿಸಿದರು. ಬಳಿಕ ಒಪ್ಪಿಕೊಂಡರು. ಅಂಬೇಡ್ಕರ್ ಮುಸ್ಲಿಮರನ್ನು ಈ ದೇಶದಲ್ಲಿ ಇಟ್ಟುಕೊಳ್ಳುವುದು ಒಳಿತಿನ ಸಂಗತಿಯಲ್ಲ ಎಂದು ಹೇಳಿದ್ದರು. ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಎಂದು ಕೊಟ್ಟ ಮೇಲೆ ಅವರನ್ನು ಅಲ್ಲಿಗೆ ಕಳುಹಿಸಿ ಅಲ್ಲಿದ್ದ ಹಿಂದೂಗಳನ್ನು ಇಲ್ಲಿಗೆ ಕರೆತನ್ನಿ ಎಂದಿದ್ದರು ಎಂದು ಹೇಳಿದರು.

ಮುಸ್ಲಿಮರ ತುಷ್ಟೀಕರಣ ತುತ್ತ ತುದಿಗೆ ಹೋಗಿರುವುದು ಜವಾಹರಲಾಲ್ ನೆಹರು ಕಾಲದಲ್ಲಿ. ಮುಸ್ಲಿಮರು ಒಟ್ಟಾರೆ ಈ ದೇಶದ ಸಮಾಜದೊಂದಿಗೆ ಒಂದಾಗಿ ಭಾರತಿಯರಾಗಿ ಹೋಗುವ ಅವಕಾಶ 1947 ರ ನಂತರ ವ್ಯವಸ್ಥಿತವಾಗಿ ಸಿಕ್ಕಿತ್ತು. ಪಾಕಿಸ್ತಾನದಂತಹ ಮುಸಲ್ಮಾನ ಜಾಗವನ್ನು ಬಿಟ್ಟು ನಾವು ಭಾರತದಲ್ಲೇ ಇರುತ್ತೇವೆ ಎಂದು ಶ್ರದ್ದಾವಂತ ಭಾರತ ಪ್ರೇಮಿ ಮುಸಲ್ಮಾನರು ಕೇವಲ ೯% ಮಾತ್ರ ಉಳಿದುಕೊಂಡಿದ್ದರು. ಅವರನ್ನು ಸುಂದರವಾಗಿ ಭಾರತದೊಂದಿಗೆ ಏಕರಸಗೊಳಿಸಿದ್ದರೆ ಭಟ್ಕಳ ಈ ಥರ ಉರಿಯುವ ಪ್ರಸಂಗವೇ ಇರುತ್ತಿರಲಿಲ್ಲ ಎಂದರು.

ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಟ್ಕಳದ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಧೋ ಧೋ ಎಂದು ಮಳೆ ಸುರಿಯಿತು. ಇದು ಶುಭ ಸೂಚಕವೆಂಬ ಉದ್ಘಾರ ಜನರಿಂದ ಕೇಳಿಬಂತು.

ಮಳೆಯಿಂದ ಭೂಮಿ ಕೆಸರಾದರೆ, ಕಮಲ ಅರಳುವುದು ನಿಶ್ಚಿತವಲ್ಲವೇನು? ಉತ್ತರ ಕನ್ನಡದ ಒಂದು ಕಮಲ ತಾಯಿ ಭಾರತಿಯ ಪದತಲಕ್ಕೆ ಸೇರಲಿದೆ.
– ಚಕ್ರವರ್ತಿ ಸೂಲಿಬೆಲೆ