ಕಣ್ಣೂರು : ಕೇರಳದ ಕಣ್ಣೂರಿನ 67 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ವ್ಯಕ್ತಿಯೊಬ್ಬರು ಸೋಮವಾರ ತಡರಾತ್ರಿ ಶವಾಗಾರದಲ್ಲಿ ಜೀವಂತವಾಗಿರುವುದು ಕಂಡುಬಂದಿದೆ…! ಇಷ್ಟು ಮಾತ್ರವಲ್ಲ ಅವರು ನಿಧನರಾಗಿದ್ದಾರೆ ಎಂದು ಸಂತಾಪ ಸೂಚಿಸುವ ಶ್ರದ್ಧಾಂಜಲಿ ಸಹ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಕಣ್ಣೂರಿನ ಪಚ್ಚಪೊಯಿಕಾ ಮೂಲದ ವೆಳ್ಳುವಕ್ಕಂಡಿ ಪವಿತ್ರನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪಾರ್ಶ್ವವಾಯು ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದರೂ, ಅವರ ಸ್ಥಿತಿಯು ಹದಗೆಟ್ಟಿತು, ಅರೋಗ್ಯ ಸುಧಾರಣೆಯಾಗದ ಕಾರಣ ಅವರಿಗೆ ವೆಂಟಿಲೇಟರ್‌ ತೆಗೆಯಲಾಗುವುದು ಎಂದು ಆಸ್ಪತ್ರೆ ಕುಟುಂಬಕ್ಕೆ ತಿಳಿಸಿತು. ಸಂಜೆಯ ಹೊತ್ತಿಗೆ, ಆಸ್ಪತ್ರೆಯು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತು ಮತ್ತು ಅವರ ದೇಹವನ್ನು ಮನೆಗೆ ಸಾಗಿಸಲು ವ್ಯವಸ್ಥೆ ಮಾಡಲಾಯಿತು.

ಸಂಜೆ 6:30ರ ಸುಮಾರಿಗೆ ಅವರ ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಲ್ಲಿ ಕಣ್ಣೂರಿಗೆ ಕಳುಹಿಸಲಾಯಿತು. ಆದರೆ, ರಾತ್ರಿಯಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲು ಕುಟುಂಬಸ್ಥರು ನಿರ್ಧರಿಸಿದರು. ಅದರಂತೆ ಸರಿಸುಮಾರು ರಾತ್ರಿ 11:30ರ ಸುಮಾರಿಗೆ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸುವಾಗ, ಕರ್ತವ್ಯದಲ್ಲಿದ್ದ ಅಟೆಂಡರ್ ಜಯನ್ ಅವರು ಅಸಹಜವಾದದ್ದನ್ನು ನೋಡಿದರು.
“ಆಂಬ್ಯುಲೆನ್ಸ್ ಅನ್ನು ತೆರೆದಾಗ, ಮಲಗಿದ್ದ ದೇಹದ ಕೈ ಚಲಿಸುತ್ತಿರುವಂತೆ ನನಗೆ ಭಾಸವಾಯಿತು” ಎಂದು ಜಯನ್ ಹೇಳಿದರು.

“ನಾನು ಶವಾಗಾರವನ್ನು ತೆರೆಯುವ ವ್ಯಕ್ತಿ ಅನೂಪ್‌ ಅವರಿಗೆ ತಿಳಿಸಿದೆ ಮತ್ತು ನನಗೆ ಅನುಮಾನವಿದೆ ಎಂದು ಹೇಳಿದೆ. ನಾವು ಅವರನ್ನು ಮುಟ್ಟಿದಾಗ, ನಮಗೆ ನಾಡಿಮಿಡಿತ ಆಗುತ್ತಿರುವ ಅನುಭವವಾಯಿತು. ಅವರ ಕುಟುಂಬವು ಅವರು ಗಂಟೆಗಳ ಹಿಂದೆ ಮೃತ ಎಂದು ಘೋಷಿಸಲಾಗಿತ್ತು ಎಂದು ತಿಳಿಸಿದರು. ಆದರೆ ನಾವು ಅವರನ್ನು ತುರ್ತು ವಿಭಾಗಕ್ಕೆ ಕರೆದೊಯ್ಯಲು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.
ಎಕೆಜಿ ಆಸ್ಪತ್ರೆಯ ವೈದ್ಯಕೀಯ ತಂಡವು ತಕ್ಷಣವೇ ಗಮನಿಸಿ ಪವಿತ್ರನ್ ಬದುಕಿರುವುದನ್ನು ಖಚಿತಪಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತು.
ಈ ಘಟನೆಯಿಂದ ಪವಿತ್ರನ್ ಅವರ ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದಾರೆ. ಎಕೆಜಿ ಆಸ್ಪತ್ರೆಯ ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.