ಸಿಡ್ನಿ: ಭಾರತ ಕ್ರಿಕೆಟ್ ತಂಡದ ಹೆಸರಾಂತ ವೇಗದ ಬೌಲರ್ ಒಬ್ಬರು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಾರಥ್ಯ ವಹಿಸಲಿದ್ದಾರೆ ಎಂದು ಕ್ರಿಕೆಟ್ ದಂತಕಥೆ ಸುನಿಲ್ ಗವಸ್ಕಾರ ಭವಿಷ್ಯ ನುಡಿದಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಬೂಮ್ರಾ ತಂಡದ ಅಗ್ರಮಾನ್ಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ತಂಡದ ಸಹ ಬೌಲರ್‌ಗಳಿಗೂ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ನಿಕಟ ಭವಿಷ್ಯದಲ್ಲೇ ಅವರು ನಾಯಕರಾದರೆ ಅಚ್ಚರಿಪಡಬೇಕಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ನಾಯಕತ್ವ ವಹಿಸಿಕೊಳ್ಳಲು ಸಮರ್ಥರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 32 ವಿಕೆಟ್‌ಗಳನ್ನು ಕಬಳಿಸಿರುವ ಬೂಮ್ರಾ, ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-3ರ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಆದರೆ ಸರಣಿಯುದ್ದಕ್ಕೂ ಬೂಮ್ರಾ ಏಕಾಂಗಿ ಹೋರಾಟ ನೀಡಿದ್ದರು.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಬೂಮ್ರಾ, 295 ರನ್ ಅಂತರದ ಬೃಹತ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಿಡ್ನಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲೂ ನಾಯಕತ್ವ ವಹಿಸಿದ್ದರೂ ಗಾಯದಿಂದಾಗಿ ಹೊರಗುಳಿಯುವಂತಾಗಿತ್ತು.
ಚಾನೆಲ್ 7′ ಸಂವಾದದಲ್ಲಿ ಈ ಕುರಿತು ಮಾತನಾಡಿರುವ ಗವಾಸ್ಕರ್ ಅವರು, ಬೂಮ್ರಾ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಒತ್ತಡವನ್ನು ನಿಭಾಯಿಸಿ
ಇತರೆ ಆಟಗಾರರು ತಮ್ಮ ಉತ್ತಮ ನಿರ್ವಹಣೆ ನೀಡುವಂತೆಯೂ ಪ್ರೇರೇಪಿಸುತ್ತಾರೆ ಎಂದು ಹೇಳಿದ್ದಾರೆ.