ನವದೆಹಲಿ: 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಲ್ವರು ಸೇರಿದಂತೆ ಕನಿಷ್ಠ ಐದು ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದ ಗೆಲುವಿನ ಮೂಲಕ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ.

ಮಂಗಳವಾರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿದ್ದು, ಎನ್‌ಡಿಎ 293, ಇಂಡಿಯಾ ಮೈತ್ರಿಕೂಟ 232 ಹಾಗೂ ಇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅತಿಹೆಚ್ಚು ಮತಗಳ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ.

ಶಂಕರ ಲಾಲ್ವಾನಿ (ಬಿಜೆಪಿ): ಮಧ್ಯಪ್ರದೇಶದ ಇಂದೋರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಂಕರ ಲಾಲ್ವಾನಿ ಅವರು 11.72 ಲಕ್ಷ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ.

ರಾಕಿಬುಲ್ ಹುಸೇನ್ (ಕಾಂಗ್ರೆಸ್): ಅಸ್ಸಾಂನ ಧುಬ್ರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಕಿಬುಲ್ ಹುಸೇನ್ 10.12 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶಿವರಾಜ ಸಿಂಗ್ ಚೌಹಾಣ (ಬಿಜೆಪಿ): ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ವಿದಿಶಾದಿಂದ ಕಣಕ್ಕಿಳಿದಿದ್ದು, ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 8.21 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಿ.ಆರ್.ಪಾಟೀಲ (ಬಿಜೆಪಿ): ಪಕ್ಷದ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ ನವಸರಿ ಕ್ಷೇತ್ರದಲ್ಲಿ7.73 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ, ಇದಕ್ಕೂ ಮುಂಚೆ ಅವರು ನಾಲ್ಕು ಬಾರಿ ಸಂಸದರಾಗಿದ್ದಾರೆ.

ಅಮಿತ್ ಶಾ (ಬಿಜೆಪಿ): ಗುಜರಾತ್‌ನ ಗಾಂಧಿನಗರದಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಕೇಂದ್ರ ಗೃಹ ಸಚಿವ ಮತ್ತು ಹಾಲಿ ಸಂಸದ ಅಮಿತ್ ಶಾ ಅವರು 7.44 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

5 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದ ಅಭ್ಯರ್ಥಿಗಳು
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದ ಗುಣಾದಿಂದ 5.40 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.
ಬಿಜೆಪಿಯ ಗುಜರಾತ್ ಅಭ್ಯರ್ಥಿ ಪಂಚಮಹಲ್‌ನಿಂದ ರಾಜಪಾಲ್‌ ಸಿಂಗ್ ಜಾದವ್ (5.09 ಲಕ್ಷ) ಮತ್ತು ವಡೋದರದಿಂದ ಹೇಮಾಂಗ ಜೋಶಿ (5.82 ಲಕ್ಷ), ಮತ್ತು ಮಧ್ಯಪ್ರದೇಶದ ಭೋಪಾಲದಿಂದ ಅಲೋಕ ಶರ್ಮಾ (5.01 ಲಕ್ಷ), ಮತ್ತು ಮಂಡ್‌ಸೋರ್‌ನಿಂದ ಸುಧೀರ್ ಗುಪ್ತಾ 5 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಕೇಸರಿ ಪಕ್ಷದ ಮಹೇಶ್ ಶರ್ಮಾ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಿಂದ 5.59 ಲಕ್ಷ ಮತಗಳಿಂದ ಜಯಗಳಿಸಿದರೆ, ಛತ್ತೀಸ್‌ಗಢದ ರಾಯ್‌ಪುರದಿಂದ ಅದರ ಅಭ್ಯರ್ಥಿ ಬ್ರಿಜ್‌ಮೋಹನ್, ಅಗರ್ವಾಲ್ 5.75 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಡಿಮೆ ಗೆಲುವಿನ ಅಂತರದಲ್ಲಿ ಗೆದ್ದವರು…
ಮಹಾರಾಷ್ಟ್ರದಲ್ಲಿ, ಏಕನಾಥ ಶಿಂಧೆ ಬಣದ ಶಿವಸೇನೆ ಅಭ್ಯರ್ಥಿ ರವೀಂದ್ರ ದತ್ತಾರಾಮ ವೈಕರ್ ಅವರು 2024 ರ ಲೋಕಸಭಾ ಚುನಾವಣೆಯ ಅತ್ಯಂತ ಕಡಿಮೆ ಅಂತರದಲ್ಲಿ ಜಯಗಳಿಸಿದ ಅಭ್ಯರ್ಥಿಯಾಗಿದ್ದಾರೆ. ಮುಂಬೈ ವಾಯವ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೀಂದ್ರ ದತ್ತಾರಾಮ ವೈಕರ್ ಅವರು ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ ಅಭ್ಯರ್ಥಿ ಅಮೋಲ ಗಜಾನನ ಕೀರ್ತಿಕರ್ ಅವರನ್ನು ಕೇವಲ 48 ಮತಗಳಿಂದ ಸೋಲಿಸಿದ್ದಾರೆ. ವೈಕರ್ 4,52,644 ಮತಗಳನ್ನು ಪಡೆದರೆ ಕೀರ್ತಿಕರ್ 4,52,596 ಮತಗಳನ್ನು ಪಡೆದರು.
ಕೇರಳದ ಅಟ್ಟಿಂಗಲ್ ಕ್ಷೇತ್ರದಲ್ಲಿ ಮತ್ತೊಂದು ಕಡಿಮೆ ಅಂತರ ಗೆಲುವು ಕಂಡುಬಂದಿದೆ, ಅಲ್ಲಿ ಅಭ್ಯರ್ಥಿ 684 ಮತಗಳಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಡ್ವೊಕೇಟ್ ಅಡೂರ್ ಪ್ರಕಾಶ ಅವರು 3,28,051 ಮತಗಳನ್ನು ಪಡೆದು 684 ಮತಗಳಿಂದ ಜಯಗಳಿಸಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ವಿ.ಜಾಯ್ 3,27,367 ಮತಗಳನ್ನು ಪಡೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಜೇಂದ್ರ ಲೋಧಿ ಅವರು ಹಮೀರಪುರ ಕ್ಷೇತ್ರದಲ್ಲಿ 2629 ಮತಗಳ ಅಂತರದಿಂದ ಗೆದ್ದಿದ್ದಾರೆ. ಲೋಧಿ 490683 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಕುನ್ವರ್ ಪುಷ್ಪೇಂದ್ರ ಸಿಂಗ್ ಚಾಂಡೆಲ್ 488054 ಮತಗಳನ್ನು ಪಡೆದರು.
ಉತ್ತರ ಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂತರದ ಮತ್ತೊಂದು ಕ್ಷೇತ್ರವೆಂದರೆ ಸೇಲಂಪುರ, ಇಲ್ಲಿ ಎಸ್‌ಪಿ ಅಭ್ಯರ್ಥಿ ರಾಮಶಂಕರ ರಾಜಭರ ಅವರು ಬಿಜೆಪಿಯ ರವೀಂದ್ರ ಕುಶಾವಾಹಾ ವಿರುದ್ಧ 3573 ಮತಗಳಿಂದ ಗೆದ್ದಿದ್ದಾರೆ. ರಾಜಭರ 4,05,472 ಮತಗಳನ್ನು ಪಡೆದರೆ, ಕುಶಾವಾಹಾ 4,01,899 ಮತಗಳನ್ನು ಪಡೆದರು.