ಬೆಂಗಳೂರು:
“ಪ್ರಜ್ವಲ್ ರೇವಣ್ಣ ಏನು ಬೇಕಾದರೂ ಹೇಳಿಕೊಳ್ಳಲಿ. ಯಾರ ಬಾಯಿಗೂ ನಾವು ಬೀಗ ಹಾಕಲು ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಎಸ್ ಐಟಿ ಮುಂದೆ ಶರಣಾಗತಿ ಆಗುತ್ತೇನೆ, ಇದೆಲ್ಲಾ ಕಾಂಗ್ರೆಸ್ ಪಿತೂರಿ ಎಂಬ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಬಗ್ಗೆ ಮಾಧ್ಯಮಗಳು ಕೇಳಿದಾಗ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ;

“ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಸಂದೇಶದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮ ಪ್ರತಿನಿಧಿಗಳು ಹೇಳಿದ್ದರಿಂದ ಈ ವಿಚಾರ ತಿಳಿಯಿತು. ಪ್ರಜ್ವಲ್ ಅವರು ಮಾತನಾಡುತ್ತಾರೆ ಎಂದು ನಾನು ಮಾತನಾಡಲು ಆಗುವುದಿಲ್ಲ. ಅವರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗದೇ ಬೇರೆ ದಾರಿಯಿಲ್ಲ. ಈ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ರಾಹುಲ್ ಗಾಂಧಿ ವಿಚಾರ ಪ್ರಸ್ತಾಪ ಮಾಡಿರುವ ಪ್ರಜ್ವಲ್ ಗೆ ಕಾಲವೇ ಉತ್ತರ ಕೊಡಲಿದೆ.”

ವಿಧಾನ ಪರಿಷತ್ ಚುನಾವಣಾ ತಯಾರಿ ಬಗ್ಗೆ ಕೇಳಿದಾಗ “ನಮ್ಮ ಸರ್ಕಾರ ಪದವೀದರರ, ಶಿಕ್ಷಕರ ಮತ್ತು ರಾಜ್ಯದ ಪ್ರಗತಿಗೆ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇನೆ.ಶಾಸಕರು, ಸಚಿವರು ಹಾಗೂ ಮುಖಂಡರು ಪಕ್ಷದ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.