ಬೆಳಗಾವಿ : ಇದೀಗ ಬೆಳಗಾವಿಯಲ್ಲಿ ಮತ್ತೆ ವಂದೇ ಭಾರತ ರೈಲು ಕುರಿತ ಚರ್ಚೆ ಜೋರಾಗಿ ಸಾಗಿದೆ. ಪುಣೆ- ಬೆಳಗಾವಿ ವಂದೇ ಭಾರತ ರೈಲನ್ನು ಹುಬ್ಬಳ್ಳಿಯವರೆಗೆ ವಿಸ್ತರಿಸುವುದಾದರೆ ಬೆಂಗಳೂರು-ಹುಬ್ಬಳ್ಳಿ- ಧಾರವಾಡ ವಂದೇ ಭಾರತ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲು ರಾಜಕೀಯ ಅಡ್ಡಿ ಏಕೆ ಎಂಬ ಬಗ್ಗೆ ಬೆಳಗಾವಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿ – ಪುಣೆ ಮಧ್ಯೆ ವಂದೇ ಭಾರತ ರೈಲು ಸಂಚಾರಕ್ಕೆ ಸಿಕ್ತು ಸಮ್ಮತಿ:

ಹುಬ್ಬಳ್ಳಿ – ಪುಣೆ ಮಧ್ಯೆ ನೂತನ ವಂದೇ ಭಾರತ ರೈಲು ಆರಂಭಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಅತಿ ಶೀಘ್ರದಲ್ಲೇ ಅಂದರೆ ಸೆ.15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 10 ವಂದೇ ಭಾರತ ರೈಲಿಗೆ ಚಾಲನೆ ನೀಡುವ ಸಾಧ್ಯತೆ ಇದೆ. ಹುಬ್ಬಳ್ಳಿ – ಪುಣೆ ನಡುವೆ ವಂದೇ ಭಾರತ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿದ್ದಾರೆ. ಹುಬ್ಬಳ್ಳಿ ಮತ್ತು ಪುಣೆ ನಡುವೆ ವಂದೇ ಭಾರತ ರೈಲು ಸಂಚಾರಕ್ಕಾಗಿ ಮತ್ತೊಂದು ವಂದೇ ಭಾರತ​ ರೈಲು ನೀಡುವಂತೆ ಅಶ್ವಿನ್ ವೈಷ್ಣವ್ ಅವರಿಗೆ ಸಚಿವ ಪ್ರಹ್ಲಾದ ಜೋಶಿ ಅವರು ಜುಲೈ ಮೊದಲ ವಾರದಲ್ಲಿ ಪತ್ರ ಬರೆದು ಮನವಿ ಮಾಡಿದ್ದರು.

ರಾಜ್ಯದಲ್ಲಿ ಬೆಂಗಳೂರು ನಂತರ ಪ್ರಮುಖ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹುಬ್ಬಳ್ಳಿ – ಧಾರವಾಡ ಅವಳಿ ನಗರಕ್ಕಿದೆ. ವಂದೇ ಭಾರತ ರೈಲು ಸಂಚಾರದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಾಹತು ಬೆಳವಣಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಜೋಶಿ ಗಮನ ಸೆಳೆದಿದ್ದರು. ಹುಬ್ಬಳ್ಳಿಯಿಂದ ಮುಂಬೈ ಸಂಪರ್ಕಕ್ಕೂ ಈ ಮಾರ್ಗ ಅತ್ಯಂತ ಪ್ರಮುಖವಾಗಲಿದೆ ಎಂಬುದನ್ನು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ವಂದೇ ಭಾರತ ರೈಲು ಸಂಚಾರ ಆರಂಭಿಸಲು ಒತ್ತಾಯಿಸಿದ್ದರು.
ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚರಿಸಲಿದೆ ಎಂದು ಸಚಿವ ಪ್ರಹ್ಲಾದ​​ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರೈಲು ಸಂಚಾರದ ಉದ್ಘಾಟನೆ ದಿನ ಮತ್ತು ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಆದಷ್ಟು ಬೇಗನೆ ಪ್ರಕಟಿಸಲಿದೆ.

ಬೆಳಗಾವಿ ಬೇಡಿಕೆ ಏನು ?
ವಂದೇ ಭಾರತ ರೈಲು ವಿವಾದ ಇಂದು ನಿನ್ನೆದಲ್ಲ. ಯಾವಾಗ ದೇಶದಲ್ಲಿ ವಂದೇ ಭಾರತ ರೈಲು ಪ್ರಾರಂಭವಾಯಿತೋ ಆ ಸಂದರ್ಭದಲ್ಲಿ ಬೆಳಗಾವಿಗೆ ಆ ರೈಲಿನ ಸೌಲಭ್ಯ ಒದಗಿಸಬೇಕು ಎಂಬ ಕೂಗು ಮೊಳಗ ತೊಡಗಿತು. ಅದರಲ್ಲೂ ಬೆಂಗಳೂರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡಕ್ಕೆ ವಂದೇ ಭಾರತ ರೈಲನ್ನು ಆರಂಭಿಸಲಾಗುತ್ತದೆ ಎಂಬ ಸಂದರ್ಭದಲ್ಲಿ ಅದನ್ನು ಬೆಳಗಾವಿವರೆಗೂ ಕಾರ್ಯಾಚರಣೆ ಮಾಡಬೇಕು ಎಂಬ ಕೂಗು ಜೋರಾಯಿತು. ಆದರೆ, ಮೊದಲಿಗೆ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡದವರೆಗೆ ಮಾತ್ರ ವಂದೇ ಭಾರತ ರೈಲು ಸಂಚರಿಸುತ್ತಿತ್ತು. ಕೊನೆಗೂ ಬೆಳಗಾವಿ ಜನತೆಯ ತೀವ್ರ ಒತ್ತಡದ ಪರಿಣಾಮವಾಗಿ ಕೆಲಕಾಲದವರೆಗೆ ಬೆಳಗಾವಿವರೆಗೂ ವಂದೇ ಭಾರತ ರೈಲು ಓಡಾಡತೊಡಗಿತು.

ಆದರೆ ನಂತರ ಕೇಂದ್ರದ ಪ್ರಭಾವಿ ಸಚಿವರು ಹಾಗೂ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರು ಪರೋಕ್ಷವಾಗಿ ನೈರುತ್ಯ ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಬೆಳಗಾವಿವರೆಗೆ ಬರುವ ವಂದೇ ಭಾರತ ರೈಲನ್ನು ತಡೆಹಿಡಿಯುವಲ್ಲಿ ಮತ್ತೆ ಯಶಸ್ವಿಯಾಗಿರುವುದು ಗುಟ್ಟೇನಲ್ಲ.

ಇದೀಗ ಪುಣೆಯಿಂದ ಹೊಸದಾಗಿ ಬೆಳಗಾವಿವರೆಗೆ ವಂದೇ ಭಾರತ ರೈಲು ಓಡಾಡುವ ನಿಟ್ಟಿನಲ್ಲಿ ರೈಲ್ವೆ ಮಾರ್ಗವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ. ಇನ್ನೇನು ಈ ಮಾರ್ಗದಲ್ಲಿ ವಂದೇ ಭಾರತ ರೈಲು ಓಡಾಡಲಿದೆ ಎನ್ನುವಷ್ಟರಲ್ಲಿ ಅದನ್ನು ಪುಣೆಯಿಂದ ಹುಬ್ಬಳ್ಳಿವರೆಗೆ ಓಡಿಸಲಾಗುತ್ತಿದ್ದ ಎಂಬ ಸುದ್ದಿ ಬೆಳಗಾವಿ ಜನತೆಯನ್ನು ಬರ ಸಿಡಿಲಿನಂತೆ ಅಪ್ಪಳಿಸುವಂತೆ ಮಾಡಿದೆ. ಯಾಕೆಂದರೆ ಬೆಂಗಳೂರಿನಿಂದ ಬೆಳಗಾವಿಗೆ ರೈಲು ಆರಂಭಿಸಲು ತಾಂತ್ರಿಕ ಅಡ್ಡಿಯಾಗುತ್ತದೆ ಎಂಬ ನೆಪವೊಡ್ಡಿದ ಅಧಿಕಾರಿಗಳು ಇದೀಗ ಅದೇ ಮಾರ್ಗದಲ್ಲಿ ಯಾವ ರೀತಿಯಲ್ಲಿ ರೈಲು ಓಡಿಸುತ್ತಾರೆ ಎಂಬ ಪ್ರಶ್ನೆಯನ್ನು ಜನತೆ ಈಗ ರೈಲ್ವೆ ಅಧಿಕಾರಿಗಳ ಮುಂದಿಡುತ್ತಿದ್ದಾರೆ.

ಬೆಳಗಾವಿ ಮಾರ್ಗವಾಗಿಯೇ ಹುಬ್ಬಳ್ಳಿ- ಧಾರವಾಡದವರೆಗೆ ವಂದೇ ಭಾರತ ರೈಲು ಓಡಾಡಲಿದೆ. ಅದೇ ಮಾರ್ಗದಲ್ಲಿ ಬೆಂಗಳೂರು ರೈಲನ್ನು ಬೆಳಗಾವಿವರೆಗೂ ವಿಸ್ತರಿಸಬಹುದಲ್ಲವೇ ಎನ್ನುವುದು ಬೆಳಗಾವಿ ಜನತೆಯ ಒಕ್ಕೊರಲಿನ ಆಗ್ರಹವಾಗಿದೆ. ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಡ ಹೇರಿ ಬೆಂಗಳೂರು- ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ಮತ್ತೆ ಬೆಳಗಾವಿವರೆಗೆ ವಿಸ್ತರಿಸಲು ಮುಂದಾಗಲಿ ಎನ್ನುವುದು ಜನರ ಬೇಡಿಕೆಯಾಗಿದೆ.