ಬೆಂಗಳೂರು : ರಾಜ್ಯದಲ್ಲಿ ಸುಮಾರು 1.15 ಲಕ್ಷ ಎಕರೆಯಷ್ಟು ವಕ್ಫ್ ಆಸ್ತಿ ಇದೆ ಎಂದು ಅಂದಾಜಿಸಲಾಗಿದ್ದು, ಸದ್ಯ ಅಧಿಕೃತ ದಾಖಲೆಗಳಲ್ಲಿ 23 ಸಾವಿರ ಎಕರೆಯಷ್ಟು ಮಾತ್ರ ಉಳಿದಿದೆ. ಬಹಳಷ್ಟು ವಕ್ಫ್ ಆಸ್ತಿಗಳಿಗೆ ದಾಖಲೆಗಳಿಲ್ಲ. ಬಹಳಷ್ಟು ಆಸ್ತಿಗಳು ಒತ್ತುವರಿಗಳಾಗಿವೆ ಎಂಬುದು ಬಹುದಿನಗಳ ದೂರು. ವಕ್ಫ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಸರಕಾರ ಹಸಿರು ನಿಶಾನೆ ತೋರಿತ್ತು. ಇದನ್ನು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ದೃಢಪಡಿಸಿದ್ದಾರೆ.
ಆದರೆ, ಹಲವು ದಶಕಗಳಿಂದ ಇಂಡೀಕರಣ ಮತ್ತು ದಾಖಲೆಗಳ ದೃಢೀಕರಣ ಆಗದೆ ಕಲಂ 11ರಲ್ಲಿ ವಕ್ಫ್ ಎಂದು ನಮೂದಾಗಿರುವ ಆಸ್ತಿಗಳೆಲ್ಲವೂ ವಕ್ಫ್ ಆಸ್ತಿಗಳು ಹಾಗೂ ಸ್ವಾಧೀನದಲ್ಲಿರುವವರು ಒತ್ತುವರಿದಾರರು ಎಂದು ಭಾವಿಸಿ ನೋಟಿಸ್ ನೀಡಲಾಗುತ್ತಿದೆ. ಕೇಂದ್ರ ಸರಕಾರ ಸಂಸತ್ತಿನಲ್ಲಿ ವಕ್ಫ್ ಕಾಯಿದೆ ತಿದ್ದುಪಡಿ ವಿಧೇಯಕ ಮಂಡಿಸಿ, ಈ ಸಂಬಂಧದ ಪರಾಮರ್ಶೆಗೆ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸಿದೆ. ಈ ಕಾಯಿದೆ ಜಾರಿಗೆ ಬಂದರೆ ದಾಖಲೆ ಇಲ್ಲದ ವಕ್ಫ್ ಆಸ್ತಿಗಳು ಕೈಬಿಟ್ಟು ಹೋಗಲಿವೆ. ಅದಕ್ಕಾಗಿ ಎಲ್ಲ ವಕ್ಫ್ ಆಸ್ತಿಗಳಿಗೆ ದಾಖಲೆ ಹೊಂದಿಸಿಕೊಳ್ಳಬೇಕು ಎಂಬ ಸೂಚನೆ ಆಧರಿಸಿ ರಾಜ್ಯದಲ್ಲಿ ಈ ಪ್ರಕ್ರಿಯೆ ಚುರುಕುಗೊಂಡಿತು. ವಕ್ಫ್ ಆಸ್ತಿಗಳ ರಕ್ಷಣೆ ಹೆಸರಿನಲ್ಲಿ ಪಹಣಿಗಳ ಕಲಂ 11ನ್ನು ಪರಿಗಣಿಸಿ ‘ಒತ್ತುವರಿ’ ಎಂಬ ತೀರ್ಮಾನಕ್ಕೆ ಬಂದಿರುವುದು ವಿವಾದ ಸೃಷ್ಟಿಸಿದ್ದು, ಈ ಭೂಮಿ ಸ್ವಾಧೀನದಲ್ಲಿರುವ ರೈತರು ಮತ್ತು ನಾಗರಿಕರನ್ನು ಸಂಕಟಕ್ಕೆ ಗುರಿಮಾಡಿದೆ.ವಕ್ಫ್ ಆಸ್ತಿ ಒತ್ತುವರಿ ಸಂಬಂಧ ಹಿಂದಿನ ಸರಕಾರದ ಅವಧಿಯಲ್ಲೂ ನೋಟಿಸ್ಗಳನ್ನು ನೀಡಲಾಗಿತ್ತು. ಇದು ನಿರಂತರ ಪ್ರಕ್ರಿಯೆ ಎಂಬ ವಾದವನ್ನು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. 2019ರಿಂದ 2023ರ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 127, ಚಿಕ್ಕಮಗಳೂರಿನಲ್ಲಿ 7, ಕಲಬುರಗಿಯಲ್ಲಿ 89 ನೋಟಿಸ್ ನೀಡುವ ಪ್ರಕ್ರಿಯೆ ನಡೆದಿತ್ತು. ಕೆಲವು ಪ್ರಕರಣಗಳಲ್ಲಿ ಖಾತೆದಾರರ ಪರವಾಗಿ ಕೋರ್ಟ್ ತಡೆಯಾಜ್ಞೆ ಇದ್ದು, ಕಲಬುರಗಿ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶದಂತೆ ‘ವಕ್ಫ್’ ನಮೂದನ್ನು ತೆಗೆದುಹಾಕಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಇಂತಹ 109 ಪ್ರಕರಣಗಳನ್ನು ಗುರುತಿಸಲಾಗಿತ್ತಾದರೂ, ಯಾವುದೇ ನೋಟಿಸ್ ನೀಡಿರಲಿಲ್ಲ ಎಂದು ಅ. 30ರಂದು ಕಂದಾಯ ಆಯುಕ್ತರು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಲಿಖಿತ ವಿವರ ಸಲ್ಲಿಸಿದ್ದಾರೆ.