ಧಾರವಾಡ: ಧಾರವಾಡ ಜಿಲ್ಲೆಯ ರೈತರ, ಸಾರ್ವಜನಿಕರ ಬಹುನಿರೀಕ್ಷಿತ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ಧತೆ ಆರಂಭವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ ಹೆಬ್ಬಾಳಕರ್ ಒಡೆತನದಲ್ಲಿ ಧಾರವಾಡದ ಪುಡಕಲಕಟ್ಟಿ ಬಳಿ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ತಲೆ ಎತ್ತಲಿದೆ. ಇದು ಈ ಭಾಗದ ಸಾವಿರಾರು ರೈತರಿಗೆ ಆಶಾಕಿರಣವಾಗಿದೆ.

ಧಾರವಾಡ ಜಿಲ್ಲೆ ವಾಣಿಜ್ಯೋದ್ಯಮದಲ್ಲಿ ಸಾಕಷ್ಟು ಬೆಳೆದಿದ್ದರೂ ಜಿಲ್ಲೆಯಲ್ಲಿ ಒಂದು ಸಕ್ಕರೆ ಕಾರ್ಖಾನೆ ಇಲ್ಲದಿರುವುದು ದೊಡ್ಡ ಕೊರತೆಯಾಗಿತ್ತು. ಜಿಲ್ಲೆಯ ಕೆಲವು ಭಾಗಗಳಿಲ್ಲಿ ಕಬ್ಬು ಬೆಳೆದರೂ ಪಕ್ಕದ ಜಿಲ್ಲೆಗೆ ಸಾಗಿಸಿ ನುರಿಸಬೇಕಿದೆ. ಆದರೆ ಹಲವು ಕಾರಣಗಳಿಗಾಗಿ ರೈತರು ಆ ಕಾರ್ಖಾನೆಗಳಿಂದ ಸಂತಸ ಅನುಭವಿಸುತ್ತಿರಲಿಲ್ಲ. ಈ ಕಾರಣದಿಂದ ಬಹಳಷ್ಟು ರೈತರು ಕಬ್ಬು ಬೆಳೆಯುವ ಅಪೇಕ್ಷೆ ಇದ್ದರೂ ಹಿಂದೇಟು ಹಾಕುತ್ತಿದ್ದರು. ಇದೀಗ ರೈತ ಸ್ನೇಹಿ, ಪರಿಸರ ಸ್ನೇಹಿ, ಜನಸ್ನೇಹಿ ಕಾರ್ಖಾನೆಯೊಂದು ತಲೆ ಎತ್ತುತ್ತಿರುವುದು ಜಿಲ್ಲೆಯಲ್ಲಿ ಕಬ್ಬಿನ ಬೆಳೆ ಇನ್ನಷ್ಟು ವಿಸ್ತಾರವಾಗಲು ಕಾರಣವಾಗುವ ನಿರೀಕ್ಷೆ ಮೂಡಿಸಿದೆ.

ಅನುಭವೀ ಒಡೆತನ – ಪರಿಸರ ಸ್ನೇಹಿ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದಲ್ಲಿ ಈಗಾಗಲೆ ಸವದತ್ತಿ ಬಳಿ ಒಂದು ಸಕ್ಕರೆ ಕಾರ್ಖಾನೆ ಇದೆ. ಅದು ಆ ಭಾಗದ ಸಾವಿರಾರು ರೈತರಿಗೆ, ಸುತ್ತಲಿನ ಗ್ರಾಮಸ್ಥರಿಗೆ ವಿವಿಧ ರೀತಿಯಲ್ಲಿ ವರವಾಗಿದೆ. ವಿಶೇಷವಾಗಿ ಸಕಾಲಕ್ಕೆ ಕಬ್ಬಿನ ಬಿಲ್ ಪೂರೈಕೆ, ಸ್ನೇಹಪರ, ಶೋಷಣೆ ಮುಕ್ತ ನಡವಳಿಕೆ, ಸಿಎಸ್ಆರ್ ಫಂಡ್ ಮೂಲಕ ಜನೋಪಯೋಗಿ ಚಟುವಟಿಕೆ ಮೊದಲಾದ ಕಾರಣಗಳಿಂದಾಗಿ ರೈತರು ಮತ್ತು ಸಾರ್ವಜನಿಕರು ಕಾರ್ಖಾನೆಯಿಂದ ಖುಷಿ ಅನುಭವಿಸುತ್ತಿದ್ದಾರೆ. ಇದೀಗ ಅವರದೇ ಒಡೆತನದಲ್ಲಿ ಧಾರವಾಡದಲ್ಲಿ ಮೃಣಾಲ ಶುಗರ್ಸ್ ತಲೆ ಎತ್ತುತ್ತಿರುವುದು ಜಿಲ್ಲೆಯ ವಾಣಿಜ್ಯೋದ್ಯಮ, ಆರ್ತಿಕತೆ ಬೆಳವಣಿಗೆಯ ನಿರೀಕ್ಷೆ ಮೂಡಿಸಿದೆ.

ಹರ್ಷ ಶುಗರ್ಸ್ ಕಾರ್ಖಾನೆಗಿಂತ ಹೆಚ್ಚು ಆಧುನಿಕ ತಂತ್ರಜ್ಞಾನದೊಂದಿಗೆ ಮೃಣಾಲ ಶುಗರ್ಸ್ ಆರಂಭವಾಗಲಿದೆ. ಜೊತೆಗೆ ಕಾರ್ಖಾನೆ ಸಂಪೂರ್ಣ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದೆ. ಕಾರ್ಖಾನೆ ಬಳಸಿದ ನೀರಾಗಲಿ, ಹೊಗೆಯಾಗಲಿ ಯಾವುದೇ ರೀತಿಯಿಂದಲೂ ಪರಿಸರಕ್ಕೆ ಹಾನಿಯುಂಟು ಮಾಡುವುದಿಲ್ಲ. ಹಾಗಾಗಿಯೇ ಜೀರೋ ಲಿಕ್ವಿಡ್ ಡಿಸ್ಚಾರ್ಜ್ ಪ್ಲ್ಯಾಂಟ್ ಎನ್ನುವ ಹೆಗ್ಗಳಿಕೆ ಕಾರ್ಖಾನೆಗಿದೆ. ಕಾರ್ಖಾನೆ ಉಗುಳುವ ಹೊಗೆ ಮಾಲಿನ್ಯಕಾರಕವಾಗದ ರೀತಿಯಲ್ಲಿ ತಂತ್ರಜ್ಞಾನ ಬಳಸಲಾಗಿದೆ. ಅಲ್ಲದೆ ಇಲ್ಲಿ ಬಳಸುವ ನೀರು ಪುನಃ ಶುದ್ಧೀಕರಣಗೊಂಡು ಕಾರ್ಖಾನೆಯಲ್ಲೇ ಬಳಕೆಯಾಗಲಿದೆ.

ಉದ್ಯೋಗಾವಕಾಶ
ಕಾರ್ಖಾನೆ ಆರಂಭದಿಂದ ಹಾಲಿ ಮತ್ತು ಭಾವಿ ಕಬ್ಬು ಬೆಳೆಗಾರರು ಸಂತಸಪಟ್ಟಿದ್ದರೆ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಯುವ ಅಪೇಕ್ಷೆ ಹೊಂದಿರುವ ರೈತರು ಸಹ ತಮ್ಮ ನಿರೀಕ್ಷೆ ಈಡೇರುತ್ತಿರುವ ಸಂತಸದಲ್ಲಿದ್ದಾರೆ. ಅಲ್ಲದೆ, ಸುತ್ತಮುತ್ತಲಿವ ಗ್ರಾಮಗಳ ಯುವಕರಿಗೆ ಮನೆ ಬಾಗಿಲಲ್ಲೇ ಉದ್ಯೋಗ ದೊರೆಯವ ನಿರೀಕ್ಷೆ ಮೂಡಿದೆ. ಉದ್ಯೋಗ ಹುಡುಕಿಕೊಂಡು ದೂರದ ಊರುಗಳಿಗೆ ಹೋಗುತ್ತಿದ್ದವರಿಗೆ ತಮ್ಮೂರಲ್ಲೇ ಕಾರ್ಖಾನೆ ಆಗುತ್ತಿರುವುದು ಖುಷಿ ತಂದಿದೆ.

ಸಕ್ಕರೆ ಕಾರ್ಖಾನೆ ಆರಂಭವಾಯಿತೆಂದರೆ ಸಹಜವಾಗಿಯೇ ಇನ್ನಿತರ ವಾಣಿಜ್ಯೋದ್ಯಮ ವ್ಯವಹಾರಗಳೂ ಬೆಳೆಯುವುದರಿಂದ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗಲಿದೆ. ಜೊತೆಗೆ ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳು, ಅಂಗಡಿಗಳು ಸಹ ಆರಂಭವಾಗುತ್ತವೆ. ಇಂತಹ ಒಂದು ಕಾರ್ಖಾನೆ ಬಂತೆಂದರೆ ಇಡೀ ಊರಿನ ಬೆಳವಣಿಗೆಯ ಶಕೆ ಆರಂಭವಾಗಲಿದೆ. ಬೇರೆ ಬೆಳೆ ಬೆಳೆಯುತ್ತಿದ್ದ ರೈತರೂ ವಾಣಿಜ್ಯ ಬೆಳೆ ಕಬ್ಬಿನತ್ತ ಆಕರ್ಷಿತರಾಗುವುದರಿಂದ ಸಹಜವಾಗಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಈ ಭಾಗದಲ್ಲಿ ಜಮೀನಿಗೆ ಉತ್ತಮ ಬೆಲೆಯೂ ಸಿಗಲಿದೆ.

ರಸ್ತೆ ಸುಧಾರಣೆ
ಈ ಭಾಗದಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಅಗಲೀಕರಣ ಮಾಡಲು ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಮೂಲಕ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರೈತರಿಗೆ ಹಾಗೂ ಈ ಭಾಗದ ಜನರಿಗೆ ಈಗಾಗಲೇ ಭರವಸೆ ನೀಡಿದ್ದಾರೆ.
ಈ ಭಾಗದ ಶಾಸಕರಾಗಿರುವ ವಿನಯ ಕುಲಕರ್ಣಿ ಅವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ರೈತ ಸ್ನೇಹಿ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

—-
ಧಾರವಾಡ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಇಲ್ಲದಿರುವುದರಿಂದ ಅಲ್ಲಿನ ರೈತರಿಗೆ ಸಹಾಯವಾಗಲೆಂದು ಕಾರ್ಖಾನೆ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದೇವೆ. ರೈತರ ಹಾಗೂ ಸಾರ್ವಜನಿಕರ ಹಿತವೇ ನಮ್ಮ ಮೊದಲ ಆದ್ಯತೆ. ಪ್ರತಿಯೊದು ವಿಚಾರದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಡಿ ಇಡುತ್ತೇವೆ.
– ಲಕ್ಷ್ಮೀ ಹೆಬ್ಬಾಳಕರ್, ಸಚಿವರು

ಕಾರ್ಖಾನೆಯ ಸಿಎಸ್ಆರ್ ಪಂಡ್ ಮೂಲಕ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ, ಪ್ರತಿಭಾವಂತರಿಗೆ ಉದ್ಯೋಗಾವಕಾಶ ಸೃಷ್ಟಿ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಭಾಗದ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಿ, ರಸ್ತೆಗಳ ಸುಧಾರಣೆಗೂ ಆದ್ಯತೆ ನೀಡಲಾಗುವುದು.
– ಮೃಣಾಲ ಹೆಬ್ಬಾಳಕರ್, ಕಾರ್ಖಾನೆಯ ಚೇರಮನ್