Join The Telegram | Join The WhatsApp |
ಬೆಂಗಳೂರು-
ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ರಾಜಕೀಯ ಜೀವನದ ಎರಡನೇ ಇನಿಂಗ್ಸ್ ಪ್ರವೇಶ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಅವರು ನೆರೆಯ ಆಂಧ್ರದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯಿಂದ ಕರ್ನಾಟಕದಲ್ಲಿ ಸ್ಪರ್ಧಿಸುವ ಉತ್ಸುಕತೆ ತೋರಿದ ಸುಳಿವು ದೊರಕಿದ್ದು, ರೆಡ್ಡಿದ್ವಯರ ನಡೆ ಚರ್ಚೆಗೆ ಗ್ರಾಸವಾಗಿದೆ.
ಹೈದರಾಬಾದ್‌ನಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿಯೇ ಇರುವ ರೆಡ್ಡಿಯನ್ನು ಬೇರೆ ಪಕ್ಷದವರು ಸಂಪರ್ಕಿಸಲು ಯತ್ನಿಸುತ್ತಿದ್ದು, ಬೇರೆ ಬೇರೆ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳಿಂದಲೂ ರೆಡ್ಡಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಆರಂಭದಲ್ಲಿ ನೂತನ ಪಕ್ಷವನ್ನು ರೆಡ್ಡಿಯ ಆಪ್ತರು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಹಾಗೆ ಜನಾರ್ದನ ರೆಡ್ಡಿ ಇದೀಗ ತಮ್ಮದೇ ಹೊಸ ಪಕ್ಷ ಕಟ್ಟಲು ರೆಡಿಯಾಗಿದ್ದರೆ ಎಂದು ತಿಳಿದು ಬಂದಿದೆ, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ನಾಳೆಯೇ ರೆಡ್ಡಿ ಆಪ್ತರು ಚುನಾವಣಾ ಆಯೋಗಕ್ಕೆ ತೆರಳಲಿರುವುದು ತಿಳಿದುಬಂದಿದೆ.
ರಾಜಕೀಯ ನೆಲೆ ಕಂಡುಕೊಳ್ಳಲು ಚಿಂತನೆ ನಡೆಸಿರುವ ಗಾಲಿ ಜನಾರ್ದನ ರೆಡ್ಡಿ, ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಕಟ್ಟಲು ಮುಂದಾಗಿದ್ದು, ಈ ಸಂಬಂಧ ಅವರ ಆಪ್ತರು ದೆಹಲಿಗೆ ತೆರಳಿ ಚುನಾವಣಾ ಆಯೋಗಕ್ಕೆ ಹೊಸ ಪಕ್ಷದ ಹೆಸರು ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ಒಂದೆಡೆ ಹೊಸ ಪಕ್ಷ ಸ್ಥಾಪನೆಗೆ ಚುರುಕಿನ ಚಟುವಟಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ರೆಡ್ಡಿ ಪತ್ನಿ ಅರುಣಾ ಡಿ.14ರಂದು ಗಂಗಾವತಿಯಲ್ಲಿ ನೂತನ ಗೃಹ ಪ್ರವೇಶ ಮಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ರೆಡ್ಡಿ ಗಂಗಾವತಿಯಿಂದ ಹಾಗೂ ಅವರ ಪತ್ನಿ ಗದಗದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ, ರೆಡ್ಡಿ ತಮ್ಮ ಹೊಸ ಪಕ್ಷದ ಮೂಲಕ ರಾಜ್ಯದ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ ಎಂದೂ ಹೇಳಲಾಗಿದೆ.
Join The Telegram | Join The WhatsApp |