Join The Telegram | Join The WhatsApp |
ಹುಬ್ಬಳ್ಳಿ :
ರಾಮ ರಾಜ್ಯಕ್ಕೋಸ್ಕರ ರಾಮಮಂದಿರ ನಿರ್ಮಾಣ ಆಗುತ್ತಿದೆ. ಮಂದಿರ ಕಟ್ಟುವ ಜತೆಗೆ ಬಡವರಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡೋಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಮ ರಾಜ್ಯ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಹೊಸ ಸಂಕಲ್ಪ ಕೈಗೊಂಡಿದ್ದು , ರಾಮಸೇವಾ ಸಂಕಲ್ಪ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಿಗೂ ಸೂಚನೆ ನೀಡಲಾಗಿದೆ. ನಮ್ಮಲ್ಲಿ 1 ವರ್ಷಕ್ಕೆ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡುವವರು ಇದ್ದಾರೆ. ಅದೇ 5 ಲಕ್ಷ ರೂ. ಖರ್ಚು ಮಾಡಿದರೆ ಸುಂದರವಾದ ಸಣ್ಣ ಮನೆ ನಿರ್ಮಾಣದ ಜೊತೆ ಗೋವು , ವಿದ್ಯಾರ್ಥಿಗಳು, ರೋಗಿಗಳ ದತ್ತು ಸ್ವೀಕಾರ ಮಾಡೋಣ . ದೇಶದ ಉದ್ದಗಲದಲ್ಲಿ ಜನರಲ್ಲಿ ಈ ಪರಿವರ್ತನೆ ಆಗಬೇಕು. ದೇಶಾದ್ಯಂತ ಸೇವಾ ಕಾರ್ಯ ಐಚ್ಛಿಕವಾಗದೆ ಕಡ್ಡಾಯ ಆಗಬೇಕು. ಜೀವನದಲ್ಲಿ ವೈಭವದ ಆಚರಣೆಯ ಜೊತೆ ಬಡವರ ಬಗ್ಗೆ ಕನಿಕರ ತೋರೋಣ. ದೇವಭಕ್ತಿ ಮತ್ತು ದೇಶಭಕ್ತಿ ಬೇರೆಬೇರೆಯಲ್ಲ. ಈ ಯೋಜನೆಯ ಕುರಿತು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
2024 ರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ :
ಮುಂದಿನ ಸಂಕ್ರಾಂತಿಯೊಳಗೆ ರಾಮಮಂದಿರದ ಒಂದು ಹಂತದ ಕಾಮಗಾರಿ ಮುಕ್ತಾಯವಾಗಿರುತ್ತದೆ. ಒಂದು ಕಾಲಕ್ಕೆ ರಾಮಮಂದಿರ ನಿರ್ಮಾಣ ಎನ್ನುವುದು ಕನಸಾಗಿತ್ತು . ಆದರೆ ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿದು ಹೋಗುತ್ತದೆ ಎಂದು ಹೇಳಿದರು .
ಮಂದಿರದಿಂದ ದೇಶಕ್ಕೇನು ಲಾಭ ಅಂತ ಜನ ಪ್ರಶ್ನೆ ಕೇಳುತ್ತಾರೆ. ಮಂದಿರದ ಜೊತೆ ದೇಶದ ಜನರಿಗೂ ಸಹಾಯ ಮಾಡೋಣ. ಪ್ರಧಾನಿ ಮೋದಿ ಒಂದು ದಿನವನ್ನು ಸಂಕಲ್ಪ ದಿನ ಎಂದು ಘೋಷಿಸಬೇಕು . ದೇಶದ ಭಗವದ್ಭಕ್ತರು , ದೇಶಪ್ರೇಮಿಗಳು ಯೋಜನೆಗೆ ಕೈಜೋಡಿಸಬೇಕು . ಈ ಸೇವಾ ಕಾರ್ಯಕ್ಕೆ ಒಂದು ಆ್ಯಪ್ ಸಿದ್ಧ ಮಾಡಬೇಕು. ಪ್ರತಿ ಜಿಲ್ಲೆ , ರಾಜ್ಯದಲ್ಲಿ ಕೈಗೊಂಡ ಕೆಲಸ ದಾಖಲಾಗಬೇಕು. ಒಂದು ವರ್ಷದ ಉತ್ತಮ ಕಾರ್ಯಗಳನ್ನು ಶ್ರೀರಾಮ ದೇವರಿಗೆ ಅರ್ಪಿಸೋಣ ಎಂದರು.
ಬಡವರಿಗೆ ಮನೆ ಕಟ್ಟಿಸಿ ಕೊಡುವ ಕಾರ್ಯಕ್ಕೆ ಉಡುಪಿಯಿಂದ ಚಾಲನೆ ಸಿಗಲಿದೆ . ಹಾಗಾಗಿ ರಾಮದೇವರ ಹೆಸರಿನಲ್ಲಿ ಮನೆಗಳನ್ನು ಕಟ್ಟಿಸಿ ದಾನ ಮಾಡುವುದರೊಂದಿಗೆ ರಾಮರಾಜ್ಯದ ಕಲ್ಪನೆ ಕೃಷ್ಣನ ಸನ್ನಿಧಾನದಿಂದ ಆಗಬೇಕು ಎಂದರು .
Join The Telegram | Join The WhatsApp |