ಲಂಡನ್ : ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯ ಜೇಮ್ಸ್ ಹೋವೆಲ್ಸ್ ಕಳೆದುಕೊಂಡ ಬಿಟ್‌ಕಾಯಿನ್ ಸಂಪತ್ತನ್ನು ಹೊಂದಿದ್ದ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗ ಆ ಬಿಟ್‌ಕಾಯಿನ್‌ಗಳ ಮಾರುಕಟ್ಟೆಯ ಮೌಲ್ಯ 5,900 ಕೋಟಿ ರೂಪಾಯಿ (569 ಮಿಲಿಯನ್ ಪೌಂಡ್‌ಗಳು) ಎಂದು ಹೇಳಲಾಗಿದೆ.

ಜೇಮ್ಸ್ ಹೋವೆಲ್ಸ್ ಅವರ ಇಬ್ಬರು ಹದಿಹರೆಯದ ಪುತ್ರರ ತಾಯಿಯಾದ ಹಾಲ್ಫಿನಾ ಎಡ್ಡಿ-ಇವಾನ್ಸ್ ಸುಮಾರು ಒಂದು ದಶಕದ ಹಿಂದೆ, ಹೋವೆಲ್ಸ್‌ನ ಕೋರಿಕೆಯ ಮೇರೆಗೆ ಎಲ್ಲವನ್ನೂ ಸ್ವಚ್ಛಗೊಳಿಸುವಾಗ ವೇಲ್ಸ್‌ನ ನ್ಯೂಪೋರ್ಟ್‌ನಲ್ಲಿರುವ ಲ್ಯಾಂಡ್‌ಫಿಲ್‌ ಎಂಬ ಪ್ರದೇಶಕ್ಕೆ ಹಾರ್ಡ್ ಡ್ರೈವ್ ಅನ್ನು ಸಹ ಕೊಂಡೊಯ್ದು ಎಸೆದಿರುವುದಾಗಿ ಡೈಲಿ ಮೇಲ್‌ಗೆ ತಿಳಿಸಿದ್ದಾರೆ. ಹೌದು, ನಾನು ಆತನ ವಸ್ತುಗಳೆಲ್ಲವನ್ನೂ ತ್ಯಾಜ್ಯ ಎಂದು ಭಾವಿಸಿ ಎಸೆದಿದ್ದೇನೆ. ಆತ ಹಾಗೆ ಮಾಡಲು ಹೇಳಿದ. ಅದರ ಒಳಗೆ ಏನಿದೆ ಎಂದು ನನಗೆ ತಿಳಿದಿರಲಿಲ್ಲ, ಅದನ್ನು ಕಳೆದುಕೊಂಡಿದ್ದರಲ್ಲಿ ನನ್ನ ತಪ್ಪಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಹೋವೆಲ್ಸ್ 2009 ರಲ್ಲಿ 8,000 ಬಿಟ್‌ಕಾಯಿನ್‌ಗಳನ್ನು ಸಂಗ್ರಹಿಸಿದ್ದ. ಆದರೆ ಇತ್ತೀಚಿಗೆ ಆತನಿಗೆ ತನ್ನ ಕ್ರಿಪ್ಟೋಕರೆನ್ಸಿಯ ಅದೃಷ್ಟದ ಡಿಜಿಟಲ್ ಕೀಯನ್ನು ಹೊಂದಿರುವ ಹಾರ್ಡ್ ಡ್ರೈವ್ ಕಳೆದುಹೋಗಿದೆ ಎಂದು ಅರಿವಿಗೆ ಬರುವವರೆಗೂ ಅವುಗಳ ಬಗ್ಗೆ ಮರೆತೇ ಹೋಗಿತ್ತು. ಈಗ ನ್ಯೂಪೋರ್ಟ್ ಲ್ಯಾಂಡ್‌ಫಿಲ್‌ನಲ್ಲಿ ಸುಮಾರು 1,00,000 ಟನ್‌ಗಳಷ್ಟು ತ್ಯಾಜ್ಯವನ್ನು ಹೂಳಲಾಗಿದೆ, ಕ್ರಿಪ್ಟೋಕರೆನ್ಸಿಯ ಹೆಚ್ಚುತ್ತಿರುವ ಮೌಲ್ಯದ ಹೊರತಾಗಿಯೂ ಈಕ್ರಿಪ್ಟೋಕರೆನ್ಸಿಗಳ ಡಿಜಿಟಲ್ ಕೀ ಹೊಂದಿರುವ ಹಾರ್ಡ್ ಡ್ರೈವ್ ಹುಡುಕುವುದು ಕಷ್ಟಸಾಧ್ಯವಾದ ಕೆಲಸವಾಗಿದೆ.
ಹೋವೆಲ್ಸ್ ಅವರು ನ್ಯೂಪೋರ್ಟ್ ಸಿಟಿ ಕೌನ್ಸಿಲ್‌ ವಿರುದ್ಧ 4,900 ಕೋಟಿ ರೂ. (495 ಮಿಲಿಯನ್ ಪೌಂಡ್‌ಗಳು)ಗಳ ಮೊಕದ್ದಮೆ ಹೂಡಿದ್ದಾರೆ. ಅವರು ಅಲ್ಲಿ ಹುಡುಕುವುದನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಅದರ ಮೌಲ್ಯವು ಪ್ರತಿದಿನ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಪರಿಸರ ಕಾಳಜಿ ಮತ್ತು ಅನುಮತಿ ಮಿತಿಗಳನ್ನು ಉಲ್ಲೇಖಿಸಿ, ತ್ಯಾಜ್ಯದ ರಾಶಿಯನ್ನು ಅಗೆದು ಹುಡುಕುವ ಬಗೆಗಿನ ಅವರ ಮನವಿಯನ್ನು ನ್ಯೂಪೋರ್ಟ್ ಸಿಟಿ ಕೌನ್ಸಿಲ್ ಪದೇ ಪದೇ ನಿರಾಕರಿಸಿದೆ. “ನಮ್ಮ ಪರಿಸರ ಅನುಮತಿಯ ಅಡಿಯಲ್ಲಿ ಅದನ್ನು ಅಗೆಯಲು ಸಾಧ್ಯವಿಲ್ಲ, ಮತ್ತು ಅಂತಹ ಕೆಲಸವು ಪ್ರದೇಶದ ಮೇಲೆ ಭಾರಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ನ್ಯೂಪೋರ್ಟ್ ಸಿಟಿ ಕೌನ್ಸಿಲ್‌ ವಕ್ತಾರರು ಹೇಳುತ್ತಾರೆ.
ಮಹಿಳೆ ಎಡ್ಡಿ-ಇವಾನ್ಸ್ ಅವರು ಕ್ರಿಪ್ಟೋಕರೆನ್ಸಿಯ ಡಿಜಿಟಲ್‌ ಕೀ ಇರುವ ಹಾರ್ಡ್‌ ವೇರ್‌ ಸಿಕ್ಕರೆ ಆ ಸಂಪತ್ತಿನಲ್ಲಿ ತನಗೆ ಯಾವುದೂ ಬೇಡ ಎಂದು ಹೇಳಿದ್ದಾರೆ. ಆತ (ಹೋವೆಲ್ಸ್‌) ಅದನ್ನು ಹುಡುಕುತ್ತಾರೆ ಎಂದು ನಾನು ಭಾವಿಸುತ್ತೇನೆ, ನನಗೆ ಒಂದು ಪೈಸೆ ಬೇಡ. ಹೋವೆಲ್ಸ್‌ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಯಾಕೆಂದರೆ ಪರಿಸ್ಥಿತಿಯು ಹಾವೆಲ್ಸ್‌ ಅವರ ಮಾನಸಿಕ ಆರೋಗ್ಯದ ಮೇಲೆ ಬೀರಿದೆ ಎಂದು ಹೇಳಿದ್ದಾರೆ.

ಹುಡುಕಿದಾಗ ಹಾರ್ಡ್ ಡ್ರೈವ್ ಸಿಕ್ಕರೆ ನ್ಯೂಪೋರ್ಟ್ ಪ್ರದೇಶವನ್ನು ಯುನೈಟೆಡ್‌ ಕಿಂಗ್ಡಂನ “ದುಬೈ ಅಥವಾ ಲಾಸ್ ವೇಗಾಸ್ ಆಗಿ ಪರಿವರ್ತಿಸಲು ತನ್ನ ಕ್ರಿಪ್ಟೋಕರೆನ್ಸಿ ಮೌಲ್ಯದ 10% ರಷ್ಟನ್ನು ದಾನದ ರೂಪದಲ್ಲಿ ನೀಡುವುದಾಗಿ ಹೋವೆಲ್ಸ್ ವಾಗ್ದಾನ ಮಾಡಿದ್ದಾರೆ. ಸದ್ಯಕ್ಕೆ ಅವರ ಕಾನೂನು ಹೋರಾಟ ಮುಂದುವರಿದಿದ್ದು, ಡಿಸೆಂಬರ್ ಆರಂಭದಲ್ಲಿ ಇದರ ವಿಚಾರಣೆ ನಡೆಯಲಿದೆ.