ಬೆಳಗಾವಿ: ಭಾರತೀಯ ಜನತಾ ಪಾರ್ಟಿಗೆ ಕೇವಲ ಶ್ರೀಮಂತ ಉದ್ಯಮಿಗಳ ಪರವಾಗಿ ಕೆಲಸ ಮಾಡುವುದು ಗೊತ್ತು. ಆದರೆ ಇಂದಿರಾ ಗಾಂಧಿಯವರಿಂದ ಹಿಡಿದು ಸಿದ್ದರಾಮಯ್ಯ ಅವರ ವರೆಗೆ ಕಾಂಗ್ರೆಸ್ ಪಕ್ಷದ ಎಲ್ಲರೂ ಬಡವರ ಪರ ಕೆಲಸ ಮಾಡುತ್ತ ಬಂದಿದ್ದಾರೆ. ಬಡವರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ ಬೆಳಗಾವಿ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ, ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬಡ ಜನರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಮಧ್ಯವರ್ತಿಗಳಿಲ್ಲದೆ ಜಾರಿಯಾಗುತ್ತಿರುವ ಅಪರೂಪದ ಯೋಜನೆ ಇದಾಗಿದೆ. ಈ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಕಡೆ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಎಷ್ಟರಮಟ್ಟಿಗೆ ಜನರಿಗೆ ತಲುಪಿದೆ? ಯೋಜನೆಯಿಂದ ಜನರಿಗೆ ಹೇಗೆ ಪ್ರಯೋಜನವಾಗುತ್ತಿದೆ. ಯಾರಿಗಾದರೂ ತಲುಪದಿದ್ದರೆ ಅದಕ್ಕೆ ಕಾರಣವೇನು ಎನ್ನುವುದನ್ನೆಲ್ಲ ತಿಳಿಯುವುದಕ್ಕಾಗಿ ಎಲ್ಲ ಕಡೆ ಸಮಾವೇಶ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿಯವರಿಗೆ ಕೇವಲ ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳಿಗೆ ಯೋಜನೆಗಳನ್ನು ಸಂತೋಷವಾಗುತ್ತದೆ. ಆದರೆ ಬಡವರಿಗಾಗಿ ಕೆಲಸ ಮಾಡುವುದು ಕಾಂಗ್ರೆಸ್ ಪಕ್ಷ. ಇಂದಿರಾಗಾಂಧಿ ಕಾಲದಿಂದ ಇಂದಿನ ಸಿದ್ದರಾಮಯ್ಯನವರವರೆಗೆ ಬಡವರಿಗಾಗಿ ಕಾಂಗ್ರೆಸ್ ಎಷ್ಟೊಂದು ಯೋಜನೆಗಳನ್ನು ಜಾರಿಗೆ ತಂದಿದೆ ಎನ್ನುವುದನ್ನು ನೋಡಿ. ಈ ಯೋಜನೆಗಳಿಂದ ಜನರ ಜೀವನಕ್ಕೆ ಅನುಕೂಲವಾಗುತ್ತಿದೆ ಎಂದ ಅವರು, ಕಾಂಗ್ರೆಸ್ ತನ್ನ 6ನೇ ಗ್ಯಾರಂಟಿಯಾಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಏರಿಸುವುದಕ್ಕೂ ಬದ್ದವಾಗಿದೆ ಎಂದು ತಿಳಿಸಿದರು.
ನಾನು ರಾಜ್ಯದ ಎಲ್ಲೇ ಹೋದರೂ ನನ್ನ ಗ್ರಾಮೀಣ ಕ್ಷೇತ್ರವನ್ನು ಸ್ಮರಿಸಿ, ಸುಳೇಬಾವಿಯ ಮಹಾಲಕ್ಷ್ಮೀ, ಉಚಗಾಂವ್ ಮಳೆಕರ್ಣಿಕಾ ದೇವರಿಗೆ ವಂದಿಸಿ ಭಾಷಣ ಆರಂಭಿಸುತ್ತೇನೆ. ನಿಮ್ಮ ಆಶಿರ್ವಾದದಿಂದಾಗಿ 7 ಕೋಟಿ ಜನರಿಗೆ ಮಂತ್ರಿಯಾಗಿ ನಾನು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸದಾ ಬಡವರ, ಜನಸಾಮಾನ್ಯರ ಪರವಾಗಿ ನಿಲ್ಲುವ ಪಕ್ಷ. ಆದರೆ ಬಿಜೆಪಿಯವರು ಯಾರ ಪರ ನಿಂತಿದ್ದಾರೆ ಎನ್ನುವುದನ್ನು ತಿಳಿಸಬೇಕು. ಶ್ರೀಮಂತ ಉದ್ಯಮಿಗಳ ಪರವಾಗಿ ಮಾತ್ರ ನಿಲ್ಲುವುದು ನಿಮ್ಮ ಧ್ಯೇಯವೇ ಎಂದು ಪ್ರಶ್ನಿಸಿದರು.
ರಾಜ್ಯದ ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದಲ್ಲದೆ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ನ್ನೂ ಮಂಡಿಸಿದೆ. ಗ್ಯಾರಂಟಿ ಜೋತೆಗೆ ಅಭಿವೃದ್ಧಿಯಲ್ಲೂ ನಾವು ಹಿಂದೆ ಬಿದ್ದಿಲ್ಲ. ಆದರೆ ಕೇಂದ್ರ ಸರಕಾರ ನಮ್ಮ ತೆರಿಗೆ ಹಣವನ್ನು ನಮಗೆ ಕೊಡುತ್ತಿಲ್ಲ. ಬೇರೆ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ನೆರವು ನೀಡುವ ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅವರು ಏನೇ ಅನ್ಯಾಯ ಮಾಡಿದರೂ ನಮ್ಮ ಗ್ಯಾರಂಟಿಯೂ ಇರುತ್ತದೆ, ಅಭಿವೃದ್ಧಿಯೂ ಇರುತ್ತದೆ. ಜನರು ಸಂಶಯ ಪಡುವ ಅಗತ್ಯವಿಲ್ಲ ಎಂದು ಚನ್ನರಾಜ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ತಹಶಿಲ್ದಾರ ಸಿದ್ದರಾಯಿ ಭೋಸಗಿ, ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಹೆಸ್ಕಾಂ ಅಧಿಕಾರಿ ವಿನೋದ್ ಕೆರೂರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಕೆ ಎಸ್ ಆರ್ ಟಿ ಸಿ ಅಧಿಕಾರಿ ಲಮಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜ, ಉಚಗಾಂವ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಧುರಾ ತೇರಸೆ, ಉಚಗಾಂವ ಬ್ಲಾಕ್ ಕಾಂಗ್ರೆಸ್ ನ ಮಹಿಳಾ ಅಧ್ಯಕ್ಷೆ ಗಾಯತ್ರಿ ಪಾಟೀಲ, ಕಂಗ್ರಾಳಿ ಬಿ ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೌಸರ್ ಜಹಾನ್ ಸೈಯದ್, ಕಂಗ್ರಾಳಿ ಕೆ ಎಚ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದೊಡ್ಡವ್ವ ಮಾಳಗಿ, ಎಲ್ಲ ಗ್ರಾಮ ಪಂಚಾಯತಿಯ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ಹೋಬಳಿ ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಫಲಾನುಭವಿಗಳು, ವಿಶೇಷವಾಗಿ ಮಹಿಳೆಯರು ಭಾಗವಹಿಸಿದ್ದರು.