ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗ ಮತ್ತು ಈಸಿಲಿಬ್ ಸಾಪ್ಟ್ವೇರ್ ಲಿಮಿಟೆಡ್ ವತಿಯಿಂದ ಬೆಳಗಾವಿ ಜಿಲ್ಲಾ ಗ್ರಂಥಪಾಲಕರಿಗೆ ಗ್ರಂಥಾಲಯದ ತಂತ್ರಾಂಶದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಾಗಾರವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ವಿ. ಎಂ. ಬಂಕಾಪುರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಗ್ರಂಥಾಲಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಅತ್ಯಾಧುನಿಕ ತಂತ್ರಾಂಶವನ್ನು ಗ್ರಂಥಾಲಯ ಹೊಂದುವುದರಿಂದ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ತುಂಬಾ ಸಲೀಸಾಗಿ ನೀಡಬಹುದು. ಇದರಿಂದ ವಿದ್ಯಾರ್ಥಿಗಳ ಸಮಯ ಉಳಿಯುತ್ತದೆ.ಗ್ರಂಥಾಲಯದಲ್ಲಿನ ಪುಸ್ತಕ ಸಂಗ್ರಹ ಮತ್ತು ಅದರ ಕುರಿತು ಮಾಹಿತಿ ಸುಲಭವಾಗಿ ಗುರುತಿಸಬಹುದು. ಗ್ರಂಥಾಲಯಕ್ಕೆ ಆಧುನಿಕ ಸ್ಪರ್ಶ ನೀಡುವುದರಿಂದ ಗ್ರಂಥಾಲಯದಲ್ಲಿ ಆಮೂಲಾಗ್ರ ಬದಲಾವಣೆ ತರಬಹುದು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಈಸಿಲಿಬ್ ಸಾಪ್ಟ್ವೇರ್ ಸಹ ಸಂಸ್ಥಾಪಕ ವಾಸು ಮಾತನಾಡಿ, ಈ ತಂತ್ರಾಂಶ ತುಂಬಾ ವಿಶಿಷ್ಟವಾಗಿದೆ. ಈ ತಂತ್ರಾಂಶದಲ್ಲಿ ದತ್ತಾಂಶದ ಸಂಗ್ರಹಣೆ ಮತ್ತು ನಿರ್ವಹಣೆ ತುಂಬಾ ಸರಳವಾಗಿ ಮಾಡಬಹುದು. ತಂತ್ರಾಂಶದ ಕಾರ್ಯಕ್ಷಮತೆ ಗುಣಮಟ್ಟದಾಗಿದೆ ಜೊತೆಗೆ ಅತ್ಯಂತ ಸಧಾರಿತ ತಂತ್ರಜ್ಞಾನ ಇದಾಗಿದೆ. ತಂತ್ರಾಂಶದ ವಿವಿಧ ಆಯಾಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅವರು ಮಾತನಾಡಿ, ಗ್ರಂಥಾಲಯವು ಗಣಕೀಕರಣ ವ್ಯವಸ್ಥೆಗೆ ಒಳಪಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಸಮಯ ಉಳಿಸುತ್ತದೆ. ಇದರಿಂದ ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಬೇಕಾಗುವ ಪುಸ್ತಕಗಳು ಸುಲಭವಾಗಿ ಲಭ್ಯವಾದಾಗ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಉನ್ನತ ಬದುಕನ್ನು ಪಡೆಯುತ್ತಾರೆ.ಐಕ್ಯೂಎಸಿ ಸಂಯೋಜಕ ಡಾ. ಆದಿನಾಥ ಉಪಾಧ್ಯೆ ಉಪಸ್ಥಿತರಿದ್ದರು.ಕಾರ್ಯಾಗಾರದ ಸಂಚಾಲಕರು ಮತ್ತು ಉಪ ಗ್ರಂಥಪಾಲಕಿ ಡಾ. ಸುಮನ ಮುದ್ದಾಪುರ ಪರಿಚಯಿಸಿದರು. ವಿದ್ಯಾರ್ಥಿನಿ ಭಾರತಿ ನಾಯ್ಕ ನಿರೂಪಿಸಿದರು, ಶಿವಾನಂದ ಭೂಮಣ್ಣವರ್ ವಂದಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಮಹಾವಿದ್ಯಾಲಯದ ಗ್ರಂಥಪಾಲಕರು ಮತ್ತು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.