ಬೆಂಗಳೂರು: ರಾಜ್ಯದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತಿದ್ದು, ರಾಜ್ಯ ಸರ್ಕಾರ ವಿಕಲಚೇತನರ ಪಾಲಿಗಂತೂ ಹೃದಯವಂತ ಸರ್ಕಾರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶಾಲಯ ವತಿಯಿಂದ ಅಯೋಜಿಸಿದ್ದ ವಿಕಲಚೇತನ ದಿನಾಚರಣೆ- 2024, ಆರೈಕೆದಾರರಿಗೆ ಮಾಸಿಕ ಭತ್ಯೆ ಯೋಜನೆಗೆ ಚಾಲನೆ ಹಾಗೂ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಇಂದು ಸರ್ಕಾರ ಬಹಳಷ್ಟು ಕಾರ್ಯಕ್ರಮಗಳನ್ನು ನಮ್ಮ ಇಲಾಖೆ ವತಿಯಿಂದ ವಿಕಲಚೇತನರಿಗೆ ಕೊಟ್ಟಿದೆ. ನಮ್ಮ ಉದ್ದೇಶ; ಗುರಿ ಇಷ್ಟೇ, ವಿಶೇಷಚೇತನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು. ದೇಶದಲ್ಲಿ ಎಲ್ಲರಿಗೂ ಸಂವಿಧಾನಬದ್ಧವಾದ ಹಕ್ಕುಗಳಿವೆ. ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಅದರಲ್ಲೂ ವಿಶೇಷವಾಗಿ ವಿಶೇಷಚೇತನರಿಗೂ ಅನ್ವಯಿಸುತ್ತವೆ. ಸರ್ಕಾರ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಲು ಮುಂದಾಗಿದೆ ಎಂದರು.
ಸಂವಿಧಾನಬದ್ಧವಾದ ಹಕ್ಕನ್ನು ಎಲ್ಲರಿಗೂ ಸಮಾನವಾದ ಅಧಿಕಾರಗಳು, ಸಮಾನವಾದ ಅವಕಾಶಗಳನ್ನು, ಅದರಲ್ಲೂ ವಿಶೇಷವಾಗಿ ವಿಕಲಚೇತನರಿಗೂ ನೀಡುವುದೇ ನಮ್ಮ ಸರ್ಕಾರದ ಉದ್ದೇಶ. ಇಲಾಖೆಯ ಅನೇಕ ಕಾರ್ಯಕ್ರಮಗಳನ್ನು ವಿಕಲಚೇತನರಿಗೆ ನೀಡಲಾಗಿದೆ. ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನು ಕೈಪಿಡಿಯನ್ನು ಬಿಡುಗಡೆಗೊಳಿಲಾಗಿದೆ.
ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರಕ್ಕೆ ಒಳ್ಳೆಯ ಹೃದಯವಿದೆ; ವಿಕಲಚೇತನರ ಬಗ್ಗೆ ಅತ್ಯಂತ ಗೌರವವಿದೆ. ವಿಕಲಚೇತರಿಗೆ ಏನೆಲ್ಲ ಅನುಕೂಲಗಳನ್ನು ಮಾಡಬೇಕೆನ್ನುವುದನ್ನು ಮನಗಂಡಿದೆ ಎಂದು ಹೇಳಿದರು.
ವಿಕಲಚೇತನರ ಬಗ್ಗೆ ವಿಶೇಷ ಕಾಳಜಿ, ಆಸಕ್ತಿ ಸರ್ಕಾರಕ್ಕಿದೆ; ಹಾಗೆಯೇ, ವಿಕಲಚೇತನರನ್ನು ನೋಡಿಕೊಳ್ಳುವ ತಾಯಿಂದಿರರು, ಪೋಷಕರಾದ ಆರೈಕೆದಾರರಿಗೆ ಸರ್ಕಾರ ತಿಂಗಳಿಗೆ ಒಂದು ಸಾವಿರ ರೂಪಾಯಿ ಮಾಸಾಶನ ನೀಡುತ್ತಿದೆ. ಇದು ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಮ್ಮ ಸರ್ಕಾರ ಆರೈಕೆದಾರರಿಗೆ ಮಾಸಾಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವಿಕಲಚೇತನರು ಸಮಾಜಕ್ಕೆ ಆದರ್ಶಪ್ರಾಯರು; ಏಕೆಂದರೆ ಆ ಭಗವಂತ ಬಹಳಷ್ಟು ಒಳ್ಳೆಯ ಆರೋಗ್ಯವನ್ನು, ಒಳ್ಳೆಯ ಜೀವನವನ್ನು ನೀಡಿದ್ದರೂ ಕೆಲವೊಂದು ಸಂದಿಗ್ಧ ಸಂದರ್ಭದಲ್ಲಿ ತಲೆಯ ಮೇಲೆ ಕೈ ಇಟ್ಟುಕೊಳ್ಳುತ್ತಾರೆ. ನಮಗೆಲ್ಲ, ನಮ್ಮಂತಹ ಎಲ್ಲರಿಗೂ ವಿಕಲಚೇತನರು ಆದರ್ಶರಾಗಿದ್ದಾರೆ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ; ಎಲ್ಲರನ್ನೂ ಮೀರಿ ಸಾಧನೆ ಮಾಡಿದ್ಧಾರೆ. ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಾಲಭವನ ಅಧ್ಯಕ್ಷ ಬಿ.ಆರ್.ನಾಯ್ಡು, ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಟಿ. ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸಿದ್ದೇಶ್ವರ್, ವಿಶೇಷ ಆಹ್ವಾನಿತರಾದ ಇಂದುಮತಿ ರಾವ್, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ವಾಭಿಮಾನ ಸಮಾವೇಶವಲ್ಲ, ಅದು ಕಾಂಗ್ರೆಸ್ ಕಾಯಕರ್ತರ ಸಮಾವೇಶ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು : ಹಾಸನದಲ್ಲಿ ಗುರುವಾರ ನಡೆಯಲಿರುವುದು ಸ್ವಾಭಿಮಾನ ಸಮಾವೇಶ ಅಲ್ಲ, ಅದು ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಮಾಡುತ್ತಿರುವ ಸಮಾವೇಶ, ಇದು ಕೇವಲ ಹಾಸನದಲ್ಲಿ ಅಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಇಂಥ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದು ಪಕ್ಷ, ಅಹಿಂದ ಸಮಾವೇಶ ಅಲ್ಲ, ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದವರಾಗಿದ್ದು, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಪೂರೈಸಲು ಸಾರಿಗೆ ನಿಗಮಗಳ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬಿಬಿಎಂಪಿಯನ್ನೇ ಅಡ ಇಟ್ಟಿದ್ದರು. ವಿಧಾನಸೌಧ ಒಂದನ್ನ ಬಿಟ್ಟು ಬಹುತೇಕ ಆಸ್ತಿಪಾಸ್ತಿಗಳನ್ನು ಅಡವಿಟ್ಟಿದ್ದರು ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರು ಆರ್ಥಿಕ ತಜ್ಙ ಅಂತಾನೆ ಹೆಸರುಗಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ಮೀಸಲಿಟ್ಟಿದ್ದರೂ ಯಾವುದೇ ಸಾಲ ಹೊರೆ ಹೊರಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಅಧಿಕಾರ ಹಂಚಿಕೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಧಿಕಾರ ಹಂಚಿಕೆ ಕುರಿತಂತೆ ಅವರನ್ನೇ ಕೇಳಿದರೆ ಒಳಿತು. ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾವೆಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ನನಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜವಾಬ್ದಾರಿಯನ್ನು ವಹಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯನ್ನು ಮನೆ ಮನೆಗೆ ತಲುಪಿಸುವುದೇ ನನ್ನ ಜವಾಬ್ದಾರಿ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ವಿಕಲ ಚೇತನ ಇಲಾಖೆಗೆ 46 ಕೋಟಿ ಅನುದಾನ ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಇಲಾಖೆಗೆ ವಿಕಲಚೇತನರಿಂದ ಸಾಕಷ್ಟು ಅರ್ಜಿಗಳು ಬರುತ್ತವೆ. ವೀಲ್ ಚೇರ್, ಸ್ಕೂಟರ್, ಲ್ಯಾಪ್ ಟಾಪ್ , ಬ್ರೈಲ್ ಕಿಟ್ ಕೊಡಬೇಕು. ಹೀಗೆ ಸಾಕಷ್ಟು ಅರ್ಜಿಗಳು ಬಂದಾಗ ಇದಕ್ಕೆಲ್ಲಾ ಹಣಕಾಸು ಬೇಕಾಗಿದೆ. ಇದಕ್ಕೆ ಈಗಾಗಲೇ 14 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಉಳಿದ ಹಣ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಕ್ರಮ-ದೇಶದಲ್ಲೇ ಮೊದಲ ಬಾರಿಗೆ ಆರೈಕೆದಾರರಿಗೆ ಮಾಸಾಶನ ನೀಡಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ವಿಕಲಚೇತನರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ; ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಎಲ್ಲರಿಗೂ ಎಲ್ಲ ರೀತಿಯ ಅನುಕೂಲ ಕಲ್ಪಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಕಂಠೀರವ ಒಳಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶಾಲಯ ವತಿಯಿಂದ ಅಯೋಜಿಸಿದ್ದ ವಿಕಲಚೇತನ ದಿನಾಚರಣೆ- 2024, ಆರೈಕೆದಾರರಿಗೆ ಮಾಸಿಕ ಭತ್ಯೆ ಯೋಜನೆಗೆ ಚಾಲನೆ ಹಾಗೂ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರು ಸಮಾಜದಲ್ಲಿ ಎಂದೂ ಶಕ್ತಿಹೀನರಲ್ಲ, ಶಕ್ತಿವಂತರು. ವಿಕಲಚೇತನರ ಬಗ್ಗೆ ಅಷ್ಟೆ ಅಲ್ಲ. ಅವರನ್ನು ನೋಡಿಕೊಳ್ಳುವ ಆರೈಕೆದಾರರ ಬಗ್ಗೆಯೂ ಸರ್ಕಾರ ವಿಶೇಷ ಕಾಳಜಿ ಹೊಂದಿದೆ. ಆರೈಕೆದಾರರಿಗೆ ಒಂದು ಸಾವಿರ ರೂಪಾಯಿ ಮಾಸಾಶನ ನೀಡಲು ತೀರ್ಮಾನಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ವಿಕಲಚೇತನರ ಆರೈಕೆದಾರರಿಗೆ ಮಾಸಾಸನ ನೀಡಿದ ಹೆಗ್ಗಳಿಕೆ ಹೊಂದಿದೆ ಎಂದರು.
ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತರಿದ್ದಾರೆ, ಅವರನ್ನು ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ. ಅದರಂತೆ ಎಲ್ಲಾ ಕ್ಷೇತ್ರದಲ್ಲಿ ವಿಕಲಚೇತನರು ಭಾಗವಹಿಸುವ , ಉದ್ಯೋಗ ಪಡೆಯುವುದಕ್ಕೆ ಸಂವಿಧಾನಬದ್ಧ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ವಿಕಲಚೇತನರು ಸಮಾಜಕ್ಕೆ ಎಂದೂ ಹೊರೆಯಲ್ಲ; ಅವರೆಲ್ಲರೂ ಸಮಾಜದ ಆಸ್ತಿ. ಎಲ್ಲ ಕ್ಷೇತ್ರಗಳಲ್ಳೂ ಸಾಧನೆ ಮಾಡುತ್ತಿದ್ದಾರೆ. ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ನಡೆದ ಒಲಂಪಿಕ್ ಕ್ರೀಡಾಕೂಟಕ್ಕಿಂತ ಹೆಚ್ಚು ಪದಕಗಳನ್ನು ಬಂದಿದ್ದು ಪ್ಯಾರಾ ಒಲಂಪಿಕ್ ನಲ್ಲಿ. ಎಂದೂ ಅವರನ್ನು ಅಶಕ್ತರು, ಶಕ್ತಿಹೀನರೆಂದು ಹೇಳುವುದಕ್ಕೆ ಆಗುವುದಿಲ್ಲ. ಸಮಾಜಕ್ಕೂ ಎಂದೂ ಭಾರವಲ್ಲ; ಯಾವುದೇ ಹುದ್ದೆಗೂ ಅನರ್ಹರಲ್ಲ.
ವಿಕಲಚೇತನರ ಉದ್ಯೋಗಾವಕಾಶಕ್ಕಾಗಿ ಸಮಿತಿಯನ್ನು ರಚನೆ ಮಾಡಲಾಗಿದೆ. ಬಜೆಟ್ ನಲ್ಲಿ ವಿಕಲಚೇತನರ ಅಭ್ಯುದಯಕ್ಕಾಗಿ 64 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ. ಆ ಅನುದಾನವನ್ನು ಯಾವುದೇ ಕಾರಣಕ್ಕೂ ಖೋತಾ ಮಾಡುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಬುದ್ಧಿಮಾಂದ್ಯ ಮತ್ತು ಶ್ರವಣದೋಷವುಳ್ಳರಿಗೆ ಹೊಸದಾಗಿ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಈ ವರ್ಷ 13 ವಸತಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗಿದೆ. ವಿಕಲಚೇತನರ ಮರಣ ಪರಿಹಾರ ನಿಧಿಯನ್ನು 50 ಸಾವಿರದಿಂದ 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ವಿಕಲಚೇತನರಿಗೆ ಇಲಾಖೆಯ ಮೂಲಕ ಸಹಾಯಧನ ನೀಡಲಾಗುತ್ತಿದೆ. ಶೇ.40ರಷ್ಟು ಅಂಗವೈಕಲ್ಯತೆ ಹೊಂದಿರುವವರಿಗೆ ವಿಕಲಚೇತನರಿಗೆ ತಿಂಗಳಿಗೆ 800 ರೂಪಾಯಿ, ಶೇ. 75ಕ್ಕಿಂತ ಹೆಚ್ಚಿರುವವರಿಗೆ ಒಂದು ಸಾವಿರದ 400 ರೂಪಾಯಿ ಸಹಾಯ ಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ವಿಕಲಚೇತರಿಗೆ ಬರೀ 800 ರೂಪಾಯಿ ಸಹಾಯ ಧನ ನೀಡಲಾಗುತ್ತಿದೆ. ಅದನ್ನು ಹೆಚ್ಚಳ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿಯವರು ಇದೇ ವೇಳೆ ಹೇಳಿದರು.
ವಿಕಲ ಚೇತನರು ದೇವರ ಮಕ್ಕಳು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ವಿಕಲ ಚೇತನರಾದರೂ ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ನಮಗೆಲ್ಲಾ ಮಾದರಿಯಾಗಿದ್ದಾರೆ. ವಿಕಲ ಚೇತನರು ಅಂದರೆ ದೇವರ ಮಕ್ಕಳಿದ್ದಂತೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿದ ಅವರು ವಿಶೇಷ ಚೇತನರಿಗೆ ಮನೋಬಲವೇ ಶಕ್ತಿ ಎಂದರು.
ಕಳೆದ ಬಾರಿ ಸಾಮಾನ್ಯ ಒಲಿಂಪಿಕ್ಸ್ಗಿಂತಲೂ ಪ್ಯಾರಾ ಒಲಿಂಪಿಕ್ಸ್ನಲ್ಲಿ ವಿಶೇಷ ಚೇತನರು ೨೧ ಪದಕಗಳನ್ನು ಭಾರತಕ್ಕೆ ಗೆದ್ದುಕೊಟ್ಟರು. ಅಂಗ ವೈಕಲ್ಯವನ್ನು ಮೆಟ್ಟಿ ನಿಂತು ವಿಕಲ ಚೇತನರು ಉತ್ತಮ ಸಾಧನೆ ಮಾಡಿರುವ ಉದಾಹರಣೆಗಳು ನಮ್ಮ ಮುಂದಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಥ್ಯದ ನಮ್ಮ ಸರ್ಕಾರ ವಿಶೇಷ ಚೇತನರ ಕಾರ್ಯಕ್ರಮಗಳನ್ನು ಮುಟ್ಟಿಸುತ್ತೇವೆ. ಭಗವಂತನ ಸೃಷ್ಟಿ ನಿಮಗೆ ಸಾಧನೆ ಮಾಡಲು ಪ್ರೇರಣೆಯಾಗಿದೆ. ವಿಘ್ನಗಳನ್ನು ನಿವಾರಿಸುವ ಗಣಪತಿಯೇ ವಿಕಲಚೇತನರಿಗೆ ಸ್ಫೂರ್ತಿ. ಹಾಗಾಗಿ ಅವರಲ್ಲಿ ಆತ್ಮಬಲ ಹೆಚ್ಚಿದೆ. ವಿಕಲಚೇತನರ ಸಾಧನೆ ಇತಿಹಾಸದ ಪುಟಗಳಲ್ಲಿದ್ದು, ಅವರ ಅಭಿವೃದ್ಧಿಗೆ ಹಾಗೂ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ತುಂಬಾ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷ ಚೇತನರಿಗೆ ಇಲಾಖೆಯಲ್ಲಿರುವ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ತಲುಪಿಸುತ್ತಿದ್ದಾರೆ. ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ ತರಲು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರ ಕಾರ್ಯವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು.
ಮುಖ್ಯಮಂತ್ರಿ, ಸಚಿವರಿಂದ ಪ್ರಶಸ್ತಿ ಪುರಸ್ಕೃತರಿಗೆ ಗೌರವ :
ಬೆಂಗಳೂರು: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ 2024ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಬಾರಿ ವಿಕಲಚೇತನರ ಆರೈಕೆದಾರರಿಗೂ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಅಯೋಜಿಸಿದ್ದ ವಿಕಲಚೇತನರ ದಿನಾಚರಣೆ – ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಬಾರಿ ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ಗುಲಗಂಜಿ ಕೊಪ್ಪದ ಹನುಮಂತ ಹಾವಣ್ಣನವರ,
ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಮರ್ತೂರ ಗಲ್ಲಿಯ ಸಬಿಯಾ ಬೇಗಂ, ದಾವಣಗೆರೆ ಜಿಲ್ಲೆಯ ಬ್ರಹ್ಮಸಮುದ್ರದ ಮಹಾಂತೇಶ ಬ್ರಹ್ಮ, ರಾಯಚೂರಿನ ಮಂಡಿಪೇಟೆಯ ಹೊನ್ನಪ್ಪ, ಮೈಸೂರಿನ ಚಾಮುಂಡಿಬೆಟ್ಟದ ಎನ್. ಶ್ರೀಧರ ದೀಕ್ಷಿತ್, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕೊಳೂರಿನ ಮಹೇಶ ರಾಮನಾಥ ತೋಟದ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಡುಪಿಯ ಹೆಗ್ಗುಂಜೆ ಗ್ರಾಮದ ಉಮೇಶ್ ಕುಂದರ್, ಬೆಂಗಳೂರು ಹೆಬ್ಬಗೋಡಿ ಸಮೀಪದ ಕಮ್ಮಸಂದ್ರದ ಅನಿಲ್ ಡಿ. ಅಲ್ಮೇಡ್ಲಾ, ರಾಯಚೂರು ಜಿಲ್ಲೆ ಲಿಂಗಸಗೂರಿನ ಹಿರೇಜಾವೂರಿನ ನಾಗರಾಜ ನಾಡಗೌಡರ, ಬೆಂಗಳೂರು ಗೊರಗುಂಟೆಪಾಳ್ಯದ ಮೇಘನಾ ಜೋಯಿಸ್, ಮೈಸೂರಿನ ಬೋಗಾದಿಯ ಡಿ. ಮಧುಸೂದನ, ಬೆಂಗಳೂರು ಆಂಧ್ರಹಳ್ಳಿ ಕಾಳಿಕಾನಗರದ ವಿ. ಮಂಜುಳಾ, ಬೆಳಗಾವಿ ಜಿಲ್ಲೆ ಬೈಲಹೊಂಗಲ ಗುಂಡ್ಲೂರ ಚಾಳದ ಫಕ್ಕಿರಗೌಡ ಚನ್ನಬಸಪ್ಪ ಪಾಟೀಲ್ ಹಾಗೂ ಗದಗ ಜಿಲ್ಲೆ ಮುಂಡರಗಿಯ ವಿಜಯಕುಮಾರ್ ಎಚ್. ಬಣಕಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಕಲಚೇತನರ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಎರಡು ಅತ್ಯುತ್ತಮ ಸಂಸ್ಥೆಗಳಿಗೆ ಪ್ರಶಸ್ತಿ ಸಂದಿವೆ.
ಬೆಂಗಳೂರು ಬಸವೇಶ್ವರನಗರದ ಆಶಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಅಕಾಡೆಮಿ ಫಾರ್ ಹ್ಯಾಂಡಿಕ್ಯಾಪ್ಸ್ ಅಂಡ್ ಆಟಿಸಂ ಮತ್ತು ಬಾಗಲಕೋಟೆ ಜಿಲ್ಲೆ ಹುನಗುಂದ ದ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಈ ಪ್ರಶಸ್ತಿಗೆ ಭಾಜನವಾಗಿದೆ.
ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ 8 ಉತ್ತಮ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಜೆ.ಪಿ.ನಗರದ ಕೆಎಸ್ ಆರ್ ಟಿಸಿ ಲೇಔಟ್ ನ ಈಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರಿನ ಮಲ್ಪಿಪಲ್ ಸ್ಲೈರೋಸಿಸ್ ಸೊಸೈಟಿ ಆಫ್ ಇಂಡಿಯಾ, ಕೊಪ್ಪಳದ ಇನ್ನರ್ ವ್ಹೀಲ್ ಕ್ಲಬ್, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ದೇವಲಾಪುರದ ದಿ ಅಪಾಸ್ತೋಲಿಕ್ ಕಾರ್ಮೇಲ್ ವಿದ್ಯಾ ವಿಕಾಸ ಕೇಂದ್ರ ಈ ಪ್ರಶಸ್ತಿಗೆ ಅರ್ಹವಾಗಿವೆ.
ವಿಜಯಗರ ಜಿಲ್ಲೆ ಹೊಸಪೇಟೆಯ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್, ಮೈಸೂರಿನ ದ್ವಾರಕಾನಗರದ ಕರುಣಾಮಯಿ ಫೌಂಡೇಶನ್, ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲ್ಲೂಕಿನ ಚೆಟ್ಟಿ ಕುಡಿಗೆಯ ಸಂತ ಬೆನೆಡಿಕ್ಟ್ ಹೋ ಸಂಸ್ಥೆಗೆ ಪ್ರಶಸ್ತಿ ಸಂದಿದೆ.
ಬೆಂಗಳೂರಿನ ಹೆಬ್ಭಾಳದ ವಿನಾಯಕನಗರದ ಸಮ ಫೌಂಡೇಶನ್ ವಿಶೇಷ ಸನ್ಮಾನಕ್ಕೆ ಪಾತ್ರವಾಗಿದೆ.
ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ವಿಶೇಷ ಶಿಕ್ಷಕರಿಗೆ ಪ್ರಶಸ್ತಿ ಸಂದಿವೆ. ಬೀದರನ ಗುಮ್ಮೆ ಕಾಲೋನಿಯ ಅರವಿಂದ್, ಬೆಳಗಾವಿ ಕೋಟೆಯ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಗಜಾನನ, ಹಾಸನ ಜಿಲ್ಲೆ ಸಕಲೇಪುರದ ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಪ್ರಾಂಶುಪಾಲ ಲೋಕೇಶ್ ಅವರು ಈ ಪಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ವೆಂಕಟೇಶಪುರದ ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆಯ ಅನ್ನಮ್ಮ ವರ್ಗೀಸ್ ಹಾಗೂ ಬೆಂಗಳೂರು ಅನೇಕಲ್ ತಾಲ್ಲೂಕಿನ ಹುಸ್ಕೂರಿನ ವಿಶೇಷ ಶಿಕ್ಷಕ ಕರೆಪ್ಪ ಹರಿಜನ ಅವರು ಈ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಪಿಜಿ ಹಳ್ಳಿಯ ವಿಕಲಚೇತನ ಎಚ್. ಅನನ್ಯ ಅವರ ತಾಯಿ ಚೇತನಾ ಹರೀಶ್, ಬನ್ನೇರಘಟ್ಟದ ಪಿಳ್ಳಗನಹಳ್ಳಿಯ ಮಹಮ್ಮದ್ ಖದೀರ್ ಅವರ ತಾಯಿ ಅಮ್ರೀನ್, ಬೆಂಗಳೂರು ಮೋತಿನಗರದ ಪೂಜಾ ಅವರ ತಾಯಿ ತುಳಸಿ, ವಿಲ್ಸನ್ ಗಾರ್ಡ್ನ್ ನ ಪಿ.ಎಂ. ಕಾವ್ಯ ಅವರ ತಾಯಿ ಸುಶೀಲ ಹಾಗೂ ಬೆಂಗಳೂರು ಆಡುಗೋಡಿಯ ಎಚ್ .ಎಂ. ಗಾಯಿತ್ರಿಯವರ ಆರೈಕೆದಾರರಾದ ಎಚ್.ಎಂ. ನಿರ್ಮಲಾ ಅವರಿಗೆ ಭತ್ಯೆಯ ಚೆಕ್ ನ್ನು ಹಸ್ತಾಂತರಿಸಲಾಯಿತು.