ಮಂಗಳೂರು : ಕುಡ್ಲಗಿಪ್ಪ ಕುಂದಾಪ್ರ ವಾಟ್ಸಾಪ್ ಬಳಗದ ಸುಮಾರು 600 ಜನ ಕುಂದಗನ್ನಡದ ಸದಸ್ಯರು ಸೇರಿ, “ವಿಶ್ವ ಕುಂದಾಪ್ರ ದಿನಾಚರಣೆ” ಅಂಗವಾಗಿ, ದಿನಾಂಕ 11-08-2024 ರಂದು “ಕುಂದಾಪ್ರ ಕನ್ನಡ ಹಬ್ಬ -2024 ” ಕಾರ್ಯಕ್ರಮವನ್ನು ಕುಡ್ಲದ ಹೃದಯ ಭಾಗವಾದ ಬಂಟ್ಸ್ ಹಾಸ್ಟೆಲ್ (ರಾಮಕೃಷ್ಣ ಕಾಲೇಜು) ಆವರಣದಲ್ಲಿ ಆಚರಿಸಿದರು.
ಈ ಸಂಬಂಧ ಬೆಳಿಗ್ಗೆ ಆರಂಭವಾದ ವಿವಿಧ ಆಟೋಟಗಳನ್ನು, ರಾಮಕೃಷ್ಣ ಕಾಲೇಜಿನ ಸಂಚಾಲಕ ಸಂಜೀವ ರೈಯವರು ಬಲೂನನ್ನು ಹಾರಿ ಬಿಟ್ಟು ಉದ್ಘಾಟಿಸಿ , ಶುಭ ಹಾರೈಸಿದರು.
ಹಗ್ಗ ಜಗ್ಗಾಟ, ಲಿಂಬೆ ಹಣ್ಣು-ಚಮಚ,ಗೋಣಿ ಚೀಲ ಓಟ, ಮಡ್ಲ್ ನೇಯುವ ಸ್ಪರ್ಧೆ, ಮೂರ್ಕಾಲಿನ ಓಟ, ದಂಪತಿ ಜೋಡಿಗೆ ಉಪ್ಪು ಮೂಟೆ ಸ್ಪರ್ಧೆ, ಹೀಗೆ ಹತ್ತಾರು ಗ್ರಾಮೀಣ ಆಟೋಟಗಳನ್ನು, ಮಕ್ಕಳು, ಗಂಡಸರು/ಹೆಂಗಸರು, ಹಿರಿಯ ನಾಗರಿಕರಿಗೆ ಏರ್ಪಡಿಸಲಾಗಿತ್ತು ಮತ್ತು ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ಕುಂದಗನ್ನಡಿಗ ಹಾಲಾಡಿ ಶಾಂತಾರಾಮ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು. ಬಂಟ್ಸ್ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ, ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಕೋರಿದರು.
ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಾಗವಹಿಸಿದ ಸುಮಾರು 500 ಜನರಿಗೆ, ಕುಂದಾಪ್ರ ಪ್ರದೇಶದ ವಿಶೇಷ ಖಾದ್ಯಗಳನ್ನು ಒಳಗೊಂಡ ಊಟ ಉಪಚಾರ ವ್ಯವಸ್ಥೆ ಏರ್ಪರ್ಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಡೆದ, ಚೇತನ್ ನೈಲಾಡಿ ತಂಡದವರ ಹೆಂಗ್ಸ್ರ್ ಪಂಚಾಯ್ತಿ, ಸದಸ್ಯರಿಂದ ಡಾನ್ಸ್, ಯಕ್ಷಗಾನ ಕುಣಿತ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಂದಗನ್ನಡಿಗರ ಮನಸ್ಸು ರಂಜಿಸಿತು.ಮುಖ್ಯ ಪ್ರಾಯೋಜಕರಾದ ಶೇಖರ್, (ತಮನ್ವಿ ಕನ್ಟ್ರಕ್ಷನ್) ಮತ್ತು ಕುಂದಗನ್ನಡದ ರಾಯಭಾರಿ, ನಾಟಕಕಾರ, ಕಿರು ಚಿತ್ರ ನಿರ್ದೇಶಕ, ನಿರ್ಮಾಪಕ ಚೇತನ್ ನೈಲಾಡಿಯವರನ್ನು ಸನ್ಮಾನಿಸಲಾಯಿತು.
ಕುಡ್ಲಂಗಿಪ್ಪ ಕುಂದಾಪ್ರದ ಅತೀ ಹೆಚ್ಚು ಅಂಕ ಪಡೆದ SSLC ಮತ್ತು PUC ವಿದ್ಯಾರ್ಥಿಗಳನ್ನು, ಫಲಕ, ನಗದು ಬಹುಮಾನಗಳೊಂದಿಗೆ ಗುರುತಿಸಿ, ಗೌರವಿಸಲಾಯಿತು.
ಸದಸ್ಯರಾದ ಕರುಣಾಕರ ಬಳ್ಕೂರರಿಂದ ಸಂಪಾದಿಸಿದ, ವಿವಿಧ ಕುಂದಗನ್ನಡದ ಲೇಖಕರು ಬರೆದ ಆಯ್ದ ಕಥೆಗಳನ್ನು ಒಳಗೊಂಡ, ಕಥಾ ಸಂಕಲನ “ನುಡಿ ತೇರು” ಬಿಡುಗಡೆಗೊಳಿಸಲಾಯ್ತು.
ಕಾರ್ಯಕ್ರಮದ ಅಧ್ಯಕ್ಷ ಜಿ ಕೆ ಶೆಟ್ಟಿ, (ಶಂಕರನಾರಾಯಣ) ರವರು,ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ,ಈ ಕಾರ್ಯಕ್ರಮದ ಉದ್ದೇಶ ವಿವರಿಸುತ್ತಾ, ಮಂಗಳೂರಿನಲ್ಲಿ ನೆಲೆಸಿರುವ, ಕುಂದಾಪ್ರದ ಎಲ್ಲರನ್ನೂ, ಒಗ್ಗಟ್ಟಾಗಿಸಿ, ಒಬ್ಬರೊಬ್ಬರನ್ನು ಪರಿಚಯಿಸಿಕೊಂಡು, ಆತ್ಮೀಯವಾಗಿ ಬೆರೆತು, ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಒಂದು ಪ್ರಯತ್ನ ಎಂದರು.
ಒಬ್ಬರಿಗೊಬ್ಬರು ಸಹಾಯ, ಸಹಕಾರಕ್ಕೆ ಈ ಕಾರ್ಯಕ್ರಮ ಒಂದು ವೇದಿಕೆ ಎನ್ನುವುದನ್ನು ತಿಳಿಸಿದರು.ಕಾರ್ಯಕ್ರಮವನ್ನು ಖ್ಯಾತ ನಿರೂಪಕ, ಕುಂದಗನ್ನಡದ ಪ್ರತಿಭೆ ಆರ್.ಜೆ. ಪ್ರಸನ್ನ ಮತ್ತು ಆರ್.ಜೆ. ನಯನ ನಿರೂಪಿಸಿದರು.