ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.
ಇದು ಸಣ್ಣ ಆಲೋಚನೆ ಅಲ್ಲ. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಕಾರ್ಯಕ್ರಮ.
ಬೆಂಗಳೂರು : ಕನ್ನಡ ಪ್ರತಿಷ್ಠಾನದ ವತಿಯಿಂದ ವಿಶ್ವ ಕುಂದಾಪುರ ದಿನಾಚರಣೆ ಆಗಸ್ಟ್ 17 ಮತ್ತು 18ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ರವಿವಾರ ಸುದೀಕ್ಷಾ ಕನ್ವೆನ್ಷನ್ ಹಾಲ್ ನಲ್ಲಿ ಥೀಮ್ ಸಾಂಗ್ ಮತ್ತು ಪೋಸ್ಟರ್ ಅನಾವರಣಗೊಳಿಸಲಾಯಿತು. ಸಂಗೀತ ನಿರ್ದೇಶಕ ರವಿ ಬಸರೂರು ಮಾತನಾಡಿ, ಕುಂದಾಪುರ ಕನ್ನಡ ಹಬ್ಬದಲ್ಲಿ ಹಲವರು ಶ್ರಮಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ನನ್ನ ಬೆಂಬಲ ಇರಲಿದೆ. ಕುಂದಾಪುರ ಸಂಸ್ಕೃತಿಗೆ ಸಂಬಂಧಿಸಿದ ಹೊಸ ಪ್ರಯೋಗ ಮಾಡುತ್ತಿದ್ದು ಈ ಸಲ ಕುಂದಾಪುರ ಹಬ್ಬದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.
ಆಗಸ್ಟ್ 17 ರಂದು ನಗರದ ವಿವಿಧ ಬಡಾವಣೆಗಳಿಂದ ಕುಂದಾಪುರ ಕನ್ನಡ ಹಬ್ಬದ ಪುರ ಪ್ರವೇಶದ ಮೆರವಣಿಗೆ ಹೊರಟು ಅರಮನೆ ಮೈದಾನ ತಲುಪಲಿದೆ. ಮಧ್ಯಾಹ್ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಚಿತ್ರತಾರೆಯರು, ಗಣ್ಯರು ಉಪಸ್ಥಿತರಿರುವರು. ಜೋಡಾಟ ಯಕ್ಷಗಾನ, ಹಂದಾಡಿ ಮತ್ತು ತಂಡದ ಹಂದಾಡ್ತಿ ನೆಗ್ಯಾಡಿಯ ವಿಭಿನ್ನ ನಾಟಕ, ಕುಂದಾಪುರದ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ಬಯಲಾಟ, ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಆಫ್ರಿಕದ ಜಂಬೆ- ಕುಂದಾಪುರದ ಚಂಡೆಯ ಜುಗಲ್ ಬಂದಿ, ಹಗ್ಗ ಜಗ್ಗಾಟ ಸ್ಪರ್ಧೆ, ಯುವಕ- ಯುವತಿಯರಿಗೆ ಕುಂದಾಪುರ ಕನ್ನಡ ಡಿಜೆ, ಕುಂದಗೀತೆಗಳ ಡ್ಯಾನ್ಸ್, ಕುಂದಾಪುರ ಡ್ಯಾನ್ಸ್, ಕುಂದಾಪುರ ಕನ್ನಡ ಚಿತ್ರ ಪ್ರದರ್ಶನ, ಕುಂದಾಪುರ ನೆಲಮೂಲದ ಸಿನಿತಾರಾ ಮೆರಗು, ವಸ್ತು, ಒಡವೆ, ವಸ್ತ್ರ ಮೊದಲಾದವುಗಳ ಪ್ರದರ್ಶನ, ಮಾರಾಟ ಕರಾವಳಿ ಖಾದ್ಯ ಮೇಳದ ವಿಶೇಷತೆ ಇರಲಿದೆ.
ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಉಪೇಂದ್ರ ಶೆಟ್ಟಿ, ಕುಂದಾಪುರ ಕನ್ನಡ ಪ್ರತಿಷ್ಠಾನದ ದೀಪಕ್ ಶೆಟ್ಟಿ, ರಾಘವೇಂದ್ರ ಕಾಂಚನ್, ನರಸಿಂಹ ಬೀಜಾಡಿ, ಅಜಿತ್ ಶೆಟ್ಟಿ ಉಳ್ತೂರು, ಉದಯ ಹೆಗ್ಡೆ ಉಪಸ್ಥಿತರಿದ್ದರು.