ವಾರಾಣಸಿ:
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದ ಬೆನ್ನಲ್ಲೇ, ಹಿಂದೂ ಅರ್ಚಕರ ಕುಟುಂಬದವರು ಪೂಜಾ ಕಾರ್ಯ ನಡೆಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಘಟನೆ ನಡೆದ ಬಳಿಕ ಉತ್ತರ ಪ್ರದೇಶದ ಆಗಿನ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಆದೇಶದಂತೆ ಜ್ಞಾನವಾಪಿ ಮಸೀದಿ ನೆಲಮಾಳಿಗೆಗೆ ಬೀಗ ಮುದ್ರೆ ಹಾಕಲಾಗಿತ್ತು. 30 ವರ್ಷಗಳ ಬಳಿಕ ಅದನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಕೋರ್ಟ್‌ ನಿರ್ದೇಶನ ನೀಡಿತ್ತು.
ಆದೇಶದ ಬಳಿಕ ಮಧ್ಯರಾತ್ರಿಯೇ ನೆಲಮಾಳಿಗೆಯಲ್ಲಿನ ದೇವರ ವಿಗ್ರಹಗಳಿಗೆ ಪೂಜೆಗೆ ಸಿದ್ಧತೆ ಆರಂಭವಾಗಿದ್ದು, ಭಾರಿ ಭದ್ರತೆಯೊಂದಿಗೆ ಆರತಿ ಎತ್ತಲಾಯಿತು. “ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ವಿಗ್ರಹಗಳನ್ನು ಸ್ಥಾಪಿಸಿದ ಬಳಿಕ ಕೆವಿಎಂ ಟ್ರಸ್ಟ್‌ನ ಅರ್ಚಕರು ಶಾಯನ್ ಆರತಿ ಬೆಳಗಿದ್ದಾರೆ. ಅವುಗಳ ಮುಂದೆ ಅಖಂಡ ಜ್ಯೋತಿ ಬೆಳಗಿಸಲಾಗಿದೆ. ಎಲ್ಲಾ ದೇವತೆಗಳ ವಿಗ್ರಹಗಳಿಗೂ ಬೆಳಿಗ್ಗೆ ಮಂಗಳ ಆರತಿ, ಭೋಗ ಆರತಿ, ಸಂಜೆ ಆರತಿ, ಸೂರ್ಯಾಸ್ತದ ಆರತಿ ಹಾಗೂ ಶಾಯನ್ ಆರತಿಯನ್ನು ಪ್ರತಿ ದಿನವೂ ನಡೆಸಲಾಗುತ್ತದೆ’ ಎಂದು ಹಿಂದೂ ಭಕ್ತರ ಪರ ವಕೀಲ ವಿಷ್ಣು ಶಂಕ‌ರ್ ಜೈನ್‌ ತಿಳಿಸಿದರು.

ವ್ಯಾಸರ ನೆಲಮಾಳಿಗೆಗೆ (ವ್ಯಾಸ್ ಕಾ ತೆಹಖಾನಾ) ಹೋಗುವ ಮಾರ್ಗವನ್ನು ಗುರುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತೆರೆಯಲಾಯಿತು. ವಿಶ್ವನಾಥ ದೇವಾಲಯಕ್ಕೆ ಅಭಿಮುಖವಾಗಿ ಇಲ್ಲಿ ಭವ್ಯ ನಂದಿಯ ವಿಗ್ರಹವಿದೆ. ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ಸಮೀಕ್ಷೆ ಸಂದರ್ಭದಲ್ಲಿ ದೊರೆತ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಪೂಜೆ ನಡೆಯಿತು. ಭಕ್ತರಿಗೆ ಪ್ರಸಾದ ಹಂಚಲಾಯಿತು. ಜ್ಞಾನವಾಪಿಯಲ್ಲಿ ಹಿಂದೂ ದೇವತೆಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಬಿಗಿ ಗಸ್ತು ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಉತ್ತರ ಪ್ರದೇಶ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ವದಂತಿ ಹರಡುವುದನ್ನು ತಡೆಯಲು ಸಾಮಾಜಿಕ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಾಲ್ಕು ಘಟಕಗಳಿವೆ. ಅವುಗಳಲ್ಲಿ ಒಂದು ಅಲ್ಲಿ ವಾಸವಿದ್ದ ಅರ್ಚಕರ ಕುಟುಂಬದ ಸುಪರ್ದಿಯಲ್ಲಿತ್ತು. ಅದರಲ್ಲಿ ‘ವ್ಯಾಸರ ನೆಲಮಾಳಿಗೆ’ ಒಂದು. 1993ರಲ್ಲಿ ಬೀಗ ಮುದ್ರೆ ಹಾಕುವ ಮುನ್ನ ಅಲ್ಲಿ ವ್ಯಾಸ ಕುಟುಂಬದ ಸೋಮನಾಥ ವ್ಯಾಸ ಪೂಜೆ ಸಲ್ಲಿಸುತ್ತಿದ್ದರು ಎಂದು ಅರ್ಜಿದಾರ ಹಾಗೂ ಕುಟುಂಬದ ಸದಸ್ಯ ಶೈಲೇಂದ್ರ ಪಾಠಕ್ ಅರ್ಜಿಯಲ್ಲಿ ತಿಳಿಸಿದ್ದರು. “ಹಲವಾರು ವರ್ಷಗಳಿಂದ ಮುಚ್ಚಿದ ನೆಲಮಾಳಿಗೆಯನ್ನು ತೆರೆಯಲು ಮತ್ತು ಅಲ್ಲಿ ಪೂಜೆ ಸಲ್ಲಿಸಲು ಕೋರ್ಟ್ ಆದೇಶ ನೀಡಿದೆ. ಈಗ ಯಾವ ಬಣಕ್ಕೂ ಯಾವ ಸಮಸ್ಯೆಯೂ ಇರಬಾರದು. ಕೋರ್ಟ್ ಆದೇಶದಂತೆ ನಾವು ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ನಡೆಸುತ್ತೇವೆ. ನಮ್ಮ ದೇವರನ್ನು ಪೂಜಿಸುವ ಹಕ್ಕು ನಮಗೆ ದೊರಕಿದೆ. ನಮ್ಮ ಬಳಿ ಸಾಕಷ್ಟು ಪೂಜಾರಿಗಳು ಇದ್ದಾರೆ. ನಾವು ಶೀಘ್ರದಲ್ಲಿಯೇ ಪೂಜೆ ನಡೆಸುತ್ತೇವೆ” ಎಂದು ಕಾಶಿ ವಿಶ್ವನಾಥ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಪಾಂಡೆ ಹೇಳಿದ್ದರು.

ಜ್ಞಾನವಾಪಿ ಪ್ರಕರಣದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಪೂಜೆ ಸಲ್ಲಿಸಿರುವ ವಿಡಿಯೋ ದೃಶ್ಯಗಳನ್ನು ದೃಢಪಡಿಸಿದ್ದಾರೆ.ನಿತ್ಯ 5 ಆರತಿ ಮಾಡಲಾಗುತ್ತದೆ. ಮಂಗಳಾರತಿ ಬೆಳಗ್ಗೆ 3:30ಕ್ಕೆ ,ಭೋಗ ಮಧ್ಯಾಹ್ನ 12ಕ್ಕೆ,ಅಪ್ರಾಣ ಸಂಜೆ 4 ಗಂಟೆಗೆ ಸಂಜೆ 7 ಗಂಟೆಗೆ ಪೂಜೆ ಮತ್ತು ರಾತ್ರಿ 10:30 ಕ್ಕೆ ಶಯನ ಸೇವೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತುರ್ತು ವಿಚಾರಣೆಯನ್ನು ಕೋರಿ ಅಂಜುಮನ್ ಇಂಟೆಝಾಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲರು ಗುರುವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಿಜೆಐ ಅವರು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಈ ನಡುವೆ ನಿನ್ನೆ
31 ವರ್ಷಗಳ ನಂತರ ರಾತ್ರಿ ತಹಖಾನಾವನ್ನು ತೆರೆದು ಪ್ರಾರ್ಥನೆ ನಡೆಸಲಾಯಿತು. ಮಸೀದಿಯು ನೆಲಮಾಳಿಗೆಯಲ್ಲಿ ನಾಲ್ಕು ‘ತಹಖಾನಾ’ಗಳನ್ನು ಹೊಂದಿದ್ದು, ವ್ಯಾಸ್ ತಹಖಾನವು ಸ್ಪಷ್ಟವಾಗಿ ವ್ಯಾಸ ಕುಟುಂಬಕ್ಕೆ ಸೇರಿದ್ದಾಗಿದೆ. ನೆಲಮಾಳಿಗೆಯನ್ನು ಶುಚಿಗೊಳಿಸಿದ ನಂತರ, ಲಕ್ಷ್ಮಿ ದೇವಿ ಮತ್ತು ಗಣೇಶನ ‘ಆರತಿ’ ಮಾಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.ಬುಧವಾರ ರಾತ್ರಿ 9.30ರ ಸುಮಾರಿಗೆ ಕಾಶಿ-ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಸದಸ್ಯರನ್ನು ಕರೆಸಿ ಮಸೀದಿಯ ‘ವಜುಖಾನ’ಕ್ಕೆ ಎದುರಾಗಿರುವ ನಂದಿ ಪ್ರತಿಮೆಯ ಎದುರಿನ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದೆ. ಸ್ಥಳದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.