ಬೆಳ್ತಂಗಡಿ :
ಹೆಬ್ಬಾವು ಮತ್ತು ಕಾಳಿಂಗ ಸರ್ಪಗಳ ನಡುವೆ ನಡೆದ ಘನಘೋರ ಕಾಳಗದಲ್ಲಿ ಹೆಬ್ಬಾವನ್ನೇ ನುಂಗಲು ಕಾಳಿಂಗ ಯತ್ನಿಸಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಪ್ರಾಥಮಿಕ ಶಾಲೆಯ ಸಮೀಪದ ನಿವಾಸಿ ಕೆ. ಬಾಲಕೃಷ್ಣ ಗೌಡ ಅವರ ಮನೆಯ ಬಳಿ ಹಾವುಗಳ ಕದನ ನಡೆಯಿತು.
ಮಂಗಳವಾರದಂದು ಕಾಳಿಂಗ ಸರ್ಪ ಹೆಬ್ಬಾವನ್ನು ಹಿಡಿದುಕೊಂಡಿತ್ತು. ಹೆಬ್ಬಾವು ಕಾಳಿಂಗನನ್ನು ಸುತ್ತುಹಾಕಿದ್ದು ಎರಡು ಬೃಹತ್ ಗಾತ್ರದ ಹಾವುಗಳು. ಕಾಳಿಂಗ 16 ಅಡಿ ಇದ್ದರೆ, ಹೆಬ್ಬಾವು ಎಂಟು ಅಡಿ ಇತ್ತು. ಇವುಗಳ ಕದನ ಗಮನಿಸಿದ ಮನೆಯವರಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕಾಳಿಂಗ ಮನೆಯೊಳಗೆ ಬಂದರೆ ಎಂಬ ಆತಂಕ. ಕೊನೆಗೆ ಅವರು ಹಿಡಿಯುವುದರಲ್ಲಿ ಹಾವು ಹಿಡಿಯುವುದರಲ್ಲಿ ಪರಿಣತರಾಗಿರುವ ಲಾಯಿಲದ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಬರುವಂತೆ ತಿಳಿಸಿದರು.
ಸ್ನೇಕ್ ಅಶೋಕ್ ಬಂದರು. ಅವರ ಬಳಿ ಹಾವು ಹಿಡಿಯುವ ಕುಣಿಕೆ ಬಿಟ್ಟರೆ ಬೇರೇನು ಇರಲಿಲ್ಲ. ಕಾಳಿಂಗ ಹೆಬ್ಬಾವನ್ನು ನುಂಗಲು ಪ್ರಯತ್ನಿಸಿದ್ದರೆ, ಹೆಬ್ಬಾವು ಅದರ ಕುತ್ತಿಗೆಯನ್ನೇ ಹಿಡಿದಿತ್ತು. ಇದರಿಂದ ಕಾಳಿಂಗ ಸಂಕಟಕ್ಕೆ ಸಿಲುಕಿತ್ತು. ಕೊನೆಗೂ ಅಶೋಕ್ ಒಂದು ಉಪಾಯ ಮಾಡಿ ಕಾಳಿಂಗದ ಹಿಡಿತದಿಂದ ಹೆಬ್ಬಾವನ್ನು ಬಿಡಿಸಿದರು. ಕಾಳಿಂಗ ಓಡಲು ಶುರು ಮಾಡಿದಾಗ ಹಿಡಿದುಕೊಂಡರು. ಅದನ್ನು ಗೋಣಿಚೀಲಕ್ಕೆ ತುಂಬಿಸಿದರು. ಕಾಳಿಂಗದ ಹಿಡಿತದಿಂದ ಹೆಬ್ಬಾವಿಗೆ ಸಣ್ಣ ಗಾಯ ಆಗಿತ್ತು.
ಕೊನೆಗೆ ಎರಡು ಹಾವುಗಳನ್ನು ಕಾಡಿಗೆ ಬಿಡಲಾಯಿತು. ಅಶೋಕ್ ಅವರ ಧೈರ್ಯ ಜನರ ಮೆಚ್ಚುಗೆಗೆ ಪಾತ್ರವಾಯಿತು.