
ಮಂಗಳೂರು: ತೆಂಕು ತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ (70) ಭಾನುವಾರ ನಿಧನರಾದರು.
ಕೊರಗದಾಸ ಅವರ ಬಳಿ ಯಕ್ಷಗಾನ ತರಬೇತಿ ಪಡೆದಿದ್ದ ಅವರು ಕುಂಡಾವು, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದ ಕಟ್ಟೆ, ಸುರತ್ಕಲ್ ಮತ್ತು ಕಟೀಲು ಮೇಳ ಸೇರಿದಂತೆ ವಿವಿಧ ಮೇಳಗಳಲ್ಲಿ ಐದು ದಶಕಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದ್ದರು.
ಮೂಕಾಸುರ, ವಿಜಯ, ದಾರುಕ, ಪಾಪಣ್ಣ, ಬಾಹುಕ ಮೊದಲಾದ ಪೌರಾಣಿಕ ಪಾತ್ರಗಳ ನಿರ್ವಹಣೆಗೆ ಹೆಸರಾಗಿದ್ದರು. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಪಾತ್ರ ನಿರ್ವಹಿಸಬಲ್ಲವರಾಗಿದ್ದರು.
‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಭಾಜನರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.