ಶಿರಸಿ : ಸರ್ಕಾರಗಳು ಯಾವುದೇ ಬರಲಿ ಅದು ಅದರ ನೆಲೆಯಲ್ಲಿ ಕೆಲಸ ಮಾಡಲಿ. ಆದರೆ ಸಮಾಜ ಕಲಾವಿದರನ್ನ ಯಾವತ್ತಿಗೂ ಕೈ ಬಿಡಬಾರದು. ಇದೇವೇಳೆ ಪ್ರೇಕ್ಷಕರ ಅಭಿರುಚಿಯನ್ನು ಉಳಿಸುವ ಹಾಗೂ ಅವರಲ್ಲಿ ಉತ್ತಮ ಅಭಿರುಚಿ ಬೆಳೆಸುವ ಜವಾಬ್ದಾರಿ ಕಲಾವಿದರಾದ ನಮ್ಮ ಮೇಲಿದೆ ಎಂಬುದನ್ನೂ ಅರಿಯಬೇಕು ಎಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ಶಿವಾನಂದ ಕೆರೆಮನೆ ಹೇಳಿದರು.

ಶಿರಸಿಯ ನಯನ ಸಭಾಂಗಣದಲ್ಲಿ ಎಂ. ರಮೇಶ ಪ್ರಶಸ್ತಿಯನ್ನು ತ್ರ್ಯಂಬಕ ಹೆಗಡೆ ಇಡವಾಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಅವರು, ಸಮಾಜಕ್ಕೆ ಒದಗಿದ ವ್ಯಕ್ತಿ ಇನ್ನೂ ಹೆಚ್ಚಿನದನ್ನು ಮಾಡಬೇಕೆನ್ನುವ ಆಕಾಂಕ್ಷೆಯನ್ನು ಬಿಟ್ಟು ಹೋಗುತ್ತಾನೆ. ಬದುಕಿನಲ್ಲಿ ಬಿಟ್ಟುಹೋದ ಮಾತುಗಳನ್ನು ಕಟ್ಟಿಕೊಡುವವರಿಂದ ಕೊಂಡಿ ಮುಂದುವರೆಯುತ್ತದೆ. ಸಮಾಜದೊಂದಿಗೆ ಬೆರೆತು ಕೊಡುಗೆಯನ್ನು ಕೊಟ್ಟವರನ್ನು ಆಗಾಗ ನೆನಪಿಗೆ ತಂದುಕೊಳ್ಳುವುದರ ಮೂಲಕ ನಾವು ಪ್ರೇರಣೆ ಪಡೆಯುತ್ತೇವೆ ಎಂದರು.

ಅನೇಕ ಸಲ ಕಲಾವಿದ ಎಲ್ಲೆಲ್ಲೋ ಮಲಗಬೇಕಾಗುತ್ತದೆ, ಎಲ್ಲೆಲ್ಲೋ ಉಂಡು ಬದುಕುವ ಕಲಾವಿದ ಎಷ್ಟೋ ಸಂದರ್ಭಗಳಲ್ಲಿ ಅನಾಥಪ್ರಜ್ಞೆಗೆ ಒಳಗಾಗುತ್ತಾನೆ. ಅಂತಹ ಸಂದರ್ಭದಲ್ಲಿ ಬೆನ್ನಿಗೆ ಸಮಾಜ ನಿಂತರೆ ನಿಜವಾಗಲೂ ಸಾರ್ಥಕ ಕಾರ್ಯವಾಗುತ್ತದೆ ಎಂದರು.

ಉಳಿದ ಕಲೆಗಳು ಹೇಗೆ ತನ್ನತನವನ್ನು ಉಳಿಸಿಕೊಂಡಿದೆ ಎನ್ನುವುದು ಯಕ್ಷಗಾನಕ್ಕೆ ಮಾದರಿಯಾಗಬೇಕು. ಯಕ್ಷಗಾನವನ್ನು ಪಾರಂಪರಿಕ ಕಲೆಯ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾವನೆ ಹಾಗೆಯೇ ಉಳಿದಿದೆ. ಇದು ಹಿಂದೆ ಬಿದ್ದಿದೆ. ಅದು ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಡಾ.ಮೋಹನ ಹೊಸಬಾಳೆ ಮಾತನಾಡಿ, ಕಲಾವಿದರಿಗೆ ಬೇರೆ ಬೇರೆ ಪ್ರಕಾರಗಳಲ್ಲಿ ತೊಡಗಿಕೊಳ್ಳಲು ಆಸಕ್ತಿಯಿದೆ. ಆದರೆ ಹಳೆಯ ಮತ್ತು ಹೊಸ ಪ್ರಯೋಗಗಳ ನಡುವೆ ಪ್ರೇಕ್ಷಕರಿಗೆ ಗೊಂದಲವಾಗುತ್ತಿದೆ. ಈ ಸಂದರ್ಭದಲ್ಲಿ ಸಂಘಟಕರು ಪೌರಾಣಿಕ ಯಕ್ಷಗಾನಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದರು. ಈಗ ಯಕ್ಷಗಾನದಲ್ಲಿ ಹೊಸತು, ಹಳತು ಎಂಬೆಲ್ಲ ಗೊಂದಲ ಸೃಷ್ಟಿಯಾಗಿದೆ. ಕಲೆಗೆ ಪ್ರಯೋಗಗಳು ಯಾವಾಗಲೂ ಬೇಕು. ಆದರೆ ಎಷ್ಟರ ಮಟ್ಟಿಗೆ ಎಂಬುದು ಸಹ ಮುಖ್ಯವಾಗುತ್ತದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ಭಾಗವತ ತ್ರ್ಯಂಬಕ ಹೆಗಡೆ ಇಡವಾಣಿ ಅವರು, ಸನ್ಮಾನ ಮಾಡುವುದು ಮಾಡುವವರ ಸಮಾಧಾನಕ್ಕಾಗಿ. ಆ ನೆಲೆಯಲ್ಲಿ ಸನ್ಮಾನ ಸ್ವೀಕರಿಸುತ್ತಿದ್ದೇನೆ. ಬಡಿಸಿದರೆ ಹಸಿವಿರಬಾರದು, ಗುಡಿಸಿದರೆ ಕಸವಿರಬಾರದು ಎಂಬ ಸಂತೃಪ್ತ ಭಾವದಿಂದ ಪ್ರಶಸ್ತಿ ನೀಡಿದ್ದೀರಿ. ಇದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದ್ದೇನೆ ಎಂದರು.

ಎಂ. ರಮೇಶ ಪ್ರಶಸ್ತಿಯನ್ನು ತ್ರ್ಯಂಬಕ ಹೆಗಡೆ ಇಡವಾಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನೇಕ ವರ್ಷಗಳ ವರೆಗೆ ಅವರು ಯಕ್ಷಗಾನ ಭಾಗವತರಾಗಿ ಅಮೃತೇಶ್ವರಿ, ಬಚ್ಚಗಾರು ಮೊದಲಾದ ವೃತ್ತಿ ಮೇಳಗಳಲ್ಲಿ ಭಾಗವತಿಕೆ ಮಾಡಿದ್ದಾರೆ. ೨೦೦೨ರಲ್ಲಿ ಪೂರ್ಣಾಯು ಯಕ್ಷ ಕಲಾ ಕೂಟ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಮಕ್ಕಳಿಗೆ ನ್ರತ್ಯ ತರಬೇತಿ ನೀಡುವ ಜೊತೆಗೆ ಅನೇಕ ಪ್ರಸಂಗಗಳನ್ನು ನಿರ್ದೇಶಿಸಿದ್ದಾರೆ. ಸುಮಾರು ೩೦ಕ್ಕೂ ಹೆಚ್ಚು ಜನರಿಗೆ ಭಾಗವತಿಕೆಯನ್ನು ಕಲಿಸಿದ್ದಾರೆ. ಇದೇ ವೇಳೆ ಸಮಿತಿಯಿಂದ ಮೋಹನ ಹೊಸಬಾಳೆ ದಂಪತಿಗೆ ಹಾಗೂ ಯಕ್ಷಗಾನಕ್ಕೆ ಸಮ್ಮಾನ ತಂದುಕೊಟ್ಟ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಶಿವಾನಂದ ಹೆಗಡೆ ಕೆರೆಮನೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಗಮಕ ಕಲಾವಿದೆ ಸಮುದ್ಯುತ ಪ್ರಾರ್ಥಿಸಿದರು. ಡಾ.ಪ್ರಜ್ಞಾ ಮತ್ತಿಹಳ್ಳಿ ಸ್ವಾಗತಿಸಿದರು. ವಿಜಯನಳಿನಿ ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಪಿ. ಹೆಗಡೆ ವೈಶಾಲಿ ಪರಿಚಯಿಸಿದರು. ಶೈಲಜಾ ಗೊರನ್ಮನೆ ಸಮ್ಮಾನ ಪತ್ರ ವಾಚಿಸಿದರು. ಗಜಾನನ ತುಳಗೇರಿ ಭಾಗವತರು ಪ್ರಶಸ್ತಿಯ ಕುರಿತು ಸ್ವರಚಿತ ಪದ್ಯವನ್ನು ಪ್ರಸ್ತುತ ಪಡಿಸಿದರು. ಮಹಿಮಾ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಕೆರೆಕೊಪ್ಪ ಸುಬ್ರಾಯ ಹೆಗಡೆ ವಂದನಾರ್ಪಣೆ ಮಾಡಿದರು.