ಬೆಂಗಳೂರು : “ಯಕ್ಷಗಾನ ನಮ್ಮ ಸಂಸ್ಕೃತಿ. ಇದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಯಾವುದೇ ಸಮಸ್ಯೆ ಇಲ್ಲದೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ವಿಧಾನಸಭೆಯ ಗಮನ ಸೆಳೆವ ಚರ್ಚೆ ವೇಳೆ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಅವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಗೃಹ ಸಚಿವರ ಗಮನ ಸೆಳೆದರು. ಗೃಹ ಸಚಿವರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿದರು.

“ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸುನೀಲ್ ಕುಮಾರ್ ಅವರು ಪ್ರಸ್ತಾಪಿಸಿದ್ದಾರೆ. ಯಕ್ಷಗಾನ ಮಾಡುವಾಗ ಯಾರೂ ಇಂದು ಅರ್ಜಿ ಹಾಕಿ ನಾಳೆ ಯಕ್ಷಗಾನ ಪ್ರದರ್ಶನ ಮಾಡುವುದಿಲ್ಲ. ಅದಕ್ಕೆ 15 ದಿನಗಳ ತಯಾರಿ ಇರುತ್ತದೆ. ಬಿಜೆಪಿ ಕಾಲದಲ್ಲೂ ಕೆಲವು ನಿಯಮಾವಳಿಗಳನ್ನು ರೂಪಿಸಲಾಗಿದೆ. ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಪಡೆಯಲು ಕಾಲಾವಕಾಶ ನೀಡಬೇಕು. ಯಕ್ಷಗಾನ ಬೆಳಗಿನ ಜಾವದವರೆಗೂ ನಡೆಯುವುದರಿಂದ ಮಧ್ಯರಾತ್ರಿಯೇ ನಿಲ್ಲಿಸಬೇಕು ಎಂದು ಯಾರೂ ಆಕ್ಷೇಪ ಮಾಡುವುದಿಲ್ಲ. ಈಗ ಆಗಿರುವ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ಯಕ್ಷಗಾನ, ಬಯಲಾಟ ದೇಶದ ಆಸ್ತಿ. ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂಬುದು ನಮ್ಮ ಉದ್ದೇಶವಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ನಿಲ್ಲಿಸಲು ಆಗುವುದಿಲ್ಲ” ಎಂದು ಭರವಸೆ ನೀಡಿದರು.

*ಗೈಡೆನ್ಸ್ ವ್ಯಾಲ್ಯೂ ಆಧಾರದ ಮೇಲೆ ಭೂಸ್ವಾಧೀನ ಪರಿಹಾರ:*

ತರಿಕೆರೆ ಕ್ಷೇತ್ರದ ಶಾಸಕ ಜಿ.ಹೆಚ್ ಶ್ರೀನಿವಾಸ್ ಅವರು ಎತ್ತಿನ ಹೊಳೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಮ್ಮ ಕ್ಷೇತ್ರದ ಹಬ್ಬಿನಹೊಳೆ ಗ್ರಾಮದಲ್ಲಿ ಎಕರೆಗೆ ಕೇವಲ 4 ಲಕ್ಷ ಮಾತ್ರ ಪರಿಹಾರ ನೀಡಿ 40 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 2-3 ಎಕರೆ ಹೊಂದಿರುವ ರೈತರು ಇದರಿಂದ ಬೀದಿಪಾಲಾಗುತ್ತಿದ್ದಾರೆ. ಹೀಗಾಗಿ ಇವರ ರಕ್ಷಣೆಗೆ 8.92 ಕೋಟಿ ನೆರವು ನೀಡಿದರೆ ಈ ಗ್ರಾಮದ ರೈತರಿಗೆ ಆಗಿರುವ ಘೋರ ಅನ್ಯಾಯವನ್ನು ತಪ್ಪಿಸಬಹುದು ಎಂದು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಭದ್ರ ಮೇಲ್ದಂಡೆ ಯೋಜನೆ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಯೋಜನೆ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಜಮೀನಿಗೆ ಪರಿಹಾರ ನೀಡುವಾಗ ಯಾವ ರೀತಿ ನೀಡಬೇಕು ಎಂದು ನಿಯಮಗಳಿವೆ. ನಾವು ಆ ನಿಯಮಗಳ ಪ್ರಕಾರವೇ ಪರಿಹಾರ ನೀಡಬೇಕು. ಇನ್ನು 2024ರಲ್ಲಿ ನೀರು ಹರಿಸುವಾಗ ಆಗಿರುವ ಹಾನಿಯನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಿ ವರದಿ ಪಡೆದು ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.

“ನಾನು ಕೂಡ ಈ ಜಾಗಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಒಂದು ಸರ್ವೇ ಜಾಗದಲ್ಲಿ ಎಕರೆಗೆ 2 ಲಕ್ಷ ಇದ್ದರೆ ಪಕ್ಕದಲ್ಲಿರುವ ಸರ್ವೇ ಜಾಗದಲ್ಲಿ ಎಕರೆಗೆ 40 ಲಕ್ಷ ಇದೆ. ನಾವು ನಿಗದಿಯಾಗಿರುವ ಗೈಡೆನ್ಸ್ ವ್ಯಾಲು ಮೇಲೆ ಪರಿಹಾರ ತೀರ್ಮಾನ ಮಾಡಬೇಕಾಗಿರುತ್ತದೆಯೇ ಹೊರತು ಪಕ್ಕದ ಜಮೀನಿನ ಮೌಲ್ಯದ ಮೇಲಲ್ಲ. ಈ ವಿಚಾರವಾಗಿ ರೈತರ ಜತೆ ಚರ್ಚೆ ಮಾಡಲು ದಿನಾಂಕ ನಿಗದಿ ಮಾಡಿದ್ದು, ನಮ್ಮ ಕೈಲಾದ ಸಹಾಯ ಮಾಡುತ್ತೇವೆ” ಎಂದು ತಿಳಿಸಿದರು.

ಬೇಲೂರು ಕ್ಷೇತ್ರದಲ್ಲಿ ಸುಮಾರು 60 ಕಿ.ಮೀ ಉದ್ದ ಎತ್ತಿನಹೊಳೆ ಯೋಜನೆ ಸಾಗಲಿದೆ. ಈ ಯೋಜನೆಯಿಂದ ನಮ್ಮ ಭಾಗದಲ್ಲಿ 60 ಕಿ.ಮೀ ರಸ್ತೆ ಹಾಳಾಗಿದೆ. ಇದರಿಂದ ರೈತರು, ಶಾಲಾ ಮಕ್ಕಳು ಹಾಗೂ ಜನರಿಗೆ ಸಮಸ್ಯೆಯಾಗಿದ್ದು ಇದನ್ನು ಸರಿಪಡಿಸಿಕೊಡಬೇಕು ಎಂದು ಶಾಸಕ ಹೆಚ್.ಕೆ ಸುರೇಶ್ ಅವರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನಾವು ಮೊದಲು ನೀರನ್ನು ಹೊರತೆಗೆಯುವತ್ತ ಗಮನಹರಿಸಿದ್ದು, ಬೇರೆ ರಸ್ತೆಗಳಿಗೆ ಕಡಿವಾಣ ಹಾಕಿದ್ದೇವೆ. ನೀರಾವರಿ ಯೋಜನೆಗಳಿಗೆ ಮೊದಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಸದಸ್ಯರು ಗಮನ ಸೆಳೆದಿರುವ ವಿಚಾರವನ್ನು ಗಮನಹರಿಸಿ ಯಾವ ರೀತಿ ಸಹಾಯ ಮಾಡಬಹುದು ಎಂದು ಆಲೋಚಿಸುತ್ತೇವೆ” ಎಂದು ತಿಳಿಸಿದರು.

*ಗ್ರಾಮೀಣ ಭಾಗದ ಮಕ್ಕಳ ರಕ್ಷಣೆಗೆ ಬದ್ಧ:*

ಇನ್ನು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ವಿಧಾನಸಭೆಯ ಕಲಾಪದಲ್ಲಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅನುವಾದದಿಂದ ಆಗಿರುವ ಪ್ರಮಾದಗಳ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಸರ್ಕಾರದ ಪರವಾಗಿ ಉತ್ತರ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, “ನಾವು ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಅನುವಾದದಿಂದ ಆಗುತ್ತಿರುವ ಪ್ರಮಾದಗಳನ್ನು ಸರಿಪಡಿಸಲು ಆಲೋಚನೆ ಮಾಡಲಾಗುತ್ತಿದೆ. ಕನ್ನಡಿಗರು, ಗ್ರಾಮೀಣ ಪ್ರದೇಶದ ಮಕ್ಕಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ನಿಮ್ಮ ಹಾಗೂ ನಮ್ಮ ಕಾಳಜಿ ಒಂದೇ ಆಗಿದೆ” ಎಂದರು.

ನೂತನ ವಿಶ್ವವಿದ್ಯಾಲಯ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವವರು ಕೇಂದ್ರದಿಂದ ಹಣ ಕೊಡಿಸಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು:

ವಿವಿ ಮುಚ್ಚುವ ಯಾವುದೇ ಪ್ರಸ್ತಾವನೆ ಇಲ್ಲ, ವಿಸಿ ಹುದ್ದೆ ಹಾಗೂ 20-30 ಕಾಲೇಜುಗಳಿಗೆ ವಿವಿ ಸ್ಥಾಪನೆ ಮಾಡಲು ಆಗಲ್ಲ :

ಬೆಂಗಳೂರು : ನೂತನ ವಿಶ್ವವಿದ್ಯಾಲಯಕ್ಕಾಗಿ ಹೋರಾಟ ಮಾಡುತ್ತಿರುವವರು, ಆ ವಿವಿಗಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಹೇಳಬೇಕು. ಈ ವಿವಿಗೆ ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ಕೊಡಿಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಬೆಂಗಳೂರು ವಿವಿ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ನೂತನ 9 ವಿವಿಗಳ ಮುಚ್ಚುವ ಬಗ್ಗೆ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ ಎಂದು ಕೇಳಿದಾಗ, “ಯಾವುದೇ ವಿವಿ ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈ ವಿವಿಗಳಿಗಾಗಿ ಬಿಜೆಪಿ ಸರ್ಕಾರ ಕೇವಲ 2 ಕೋಟಿ ಹಣವಿಟ್ಟಿತ್ತು. 2 ಕೋಟಿ ಹಣದಲ್ಲಿ ವಿವಿ ಸ್ಥಾಪನೆ ಮಾಡಲು ಆಗುವುದಿಲ್ಲ. ಇದಕ್ಕೆ ನೂರಾರು ಎಕರೆ ಜಾಗ ಬೇಕು. ಬೆಂಗಳೂರು ವಿವಿ ಮಾಡುವಾಗ ಹೇಗೆ 1,200 ಎಕರೆ ಜಮೀನು ಇಟ್ಟು ಸ್ಥಾಪಿಸಿದ್ದರೋ, ಅದೇ ರೀತಿ ಇದರಲ್ಲಿ ಅರ್ಧದಷ್ಟು ಜಾಗವನ್ನಾದರೂ ಮೀಸಲಿಡಬೇಕು” ಎಂದು ತಿಳಿಸಿದರು.

“ಕೇವಲ ಹೆಸರಿಗಾಗಿ ವಿವಿ ಮಾಡಲು ಆಗುವುದಿಲ್ಲ. 20-30 ಕಾಲೇಜುಗಳಿಗೆ ಒಂದು ವಿವಿ ಮಾಡಲು ಸಾಧ್ಯವಿಲ್ಲ. ವಿಸಿ ಹುದ್ದೆಗಾಗಿ ವಿವಿ ಮಾಡಲು ಆಗುವುದಿಲ್ಲ. ಈ ಹಿಂದೆ ಈ ಪ್ರಯತ್ನ ಮಾಡಲಾಗಿತ್ತು. ಮಂಡ್ಯ, ಕೊಡಗು ಭಾಗದ ಅನೇಕ ವಿದ್ಯಾರ್ಥಿಗಳು ನಮಗೆ ಮೈಸೂರು ವಿವಿಯ ಹೆಸರಿನಲ್ಲೇ ಓದಬೇಕು ಡಾ.ರಾಧಾಕೃಷ್ಣ, ಕುವೆಂಪು ಅವರಿದ್ದ ಮೈಸೂರು ವಿವಿಯಲ್ಲಿ ಓದಿದರೆ ನಮಗೂ ಬಹಳ ಗೌರವವಿರುತ್ತದೆ ಎಂದು ಮನವಿ ಮಾಡಿದ್ದಾರೆ. ಇನ್ನು ಸಿಬ್ಬಂದಿಗಳು ತಮ್ಮ ಹಿರಿತನ ವ್ಯರ್ಥವಾಗುತ್ತದೆ ಎಂದು ನೂತನ ವಿವಿಗೆ ಆಗಮಿಸಲು ಮುಂದಾಗುತ್ತಿಲ್ಲ” ಎಂದು ಹೇಳಿದರು.

“ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿತ್ತು. ಇದಕ್ಕಾಗಿ ಸಚಿವ ಸಂಪುಟ ಉಪ ಸಮಿತಿ ಮಾಡಲಾಗಿತ್ತು. ಈ ಸಮಿತಿಯಲ್ಲಿ ನಾನು ಇದ್ದು ಚರ್ಚೆ ಮಾಡಿದ್ದೇನೆ. ಕೆಲವರು ರಾಜಕೀಯವಾಗಿ ಹೋರಾಟ ಮಾಡಬಹುದು. ನಮಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಇನ್ನು ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲ. ಪ್ರತಿಭಟನೆ ಮಾಡುವವರು ಮಾಡುತ್ತಿರುತ್ತಾರೆ. ವಿವಿ ಮಾಡಿದ್ದೇವೆ ಎಂದು ಹೇಳುತ್ತಿರುವವರು ಆ ವಿವಿಗೆ ಎಷ್ಟು ಹಣ ನೀಡಿದ್ದರು ಎಂದು ಹೇಳಬೇಕಲ್ಲವೇ? 2 ಕೋಟಿಯಲ್ಲಿ ವಿವಿ ಮಾಡಲು ಸಾಧ್ಯವೇ? ಆ 2 ಕೋಟಿಯೂ ಬಿಡುಗಡೆಯಾಗಿಲ್ಲ. ಪ್ರತಿಭಟನೆ ಮಾಡುತ್ತಿರುವವರು ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ತಂದು ಕೊಟ್ಟರೆ ಅಗತ್ಯವಿರುವ ಜಾಗ ಖರೀದಿ ಮಾಡಿ ವಿವಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು” ಎಂದು ತಿಳಿಸಿದರು.

ಬಂದಿರುವ ಯೋಗವನ್ನು ಕನ್ನಡ ಚಿತ್ರರಂಗ ಉಳಿಸಿಕೊಂಡು ಹೋಗಲಿ: ಡಿಸಿಎಂ ಡಿ.ಕೆ. ಶಿವಕುಮಾರ್

ಅಧಿಕಾರ ದರ್ಪ ಇದ್ದ ಕಾರಣಕ್ಕೇ ರಾಜೇಂದ್ರ ಸಿಂಗ್ ಬಾಬು ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು

ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ; ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ-
ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಡಿಸಿಎಂ

ಬೆಂಗಳೂರು : ನಾನು ಚಿತ್ರರಂಗದ ಒಳಿತಿಗಾಗಿ ಮಾತನಾಡಿದ್ದೇನೆ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ಚಿತ್ರರಂಗದ ಬಗ್ಗೆ ನಿಮ್ಮ ಮಾತುಗಳು ಒರಟಾಗಿವೆ ಎನ್ನುವ ಬಿಜೆಪಿ, ಚಿತ್ರರಂಗದವರ ಟೀಕೆಯ ಬಗ್ಗೆ ಕೇಳಿದಾಗ, “ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ. ನಾನು ನೇರವಾಗಿ ಹೇಳುತ್ತೇನೆ. ನೀವು (ಮಾಧ್ಯಮದವರು), ಅವರು ಬಂಡೆ ಎಂದು ಕರೆಯುತ್ತಾರೆ. ಹಾಗಾದರೆ ನಾನು ಬಂಡೆಯೇ? ನಾನು ಬಂಡೆಯಂತೇ ಕಾಣುತ್ತೇನೆಯೇ? ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಇದು ನನ್ನ ಮಾತಿನ ಶೈಲಿ. ಶೈಲಿ ಸರಿ ಇಲ್ಲದಿದ್ದರೆ ಸರಿಪಡಿಸಿಕೊಳ್ಳುತ್ತೇನೆ, ಆದರೆ ಸತ್ಯ ಹೇಳಿದ್ದೇನೆ” ಎಂದರು.

*ಹುಬ್ಬಳ್ಳಿಗೆ ಏಕೆ ಹೋದರು; ಬೆಂಗಳೂರಿಗೆ ನೀರು ತರುವ ಹೋರಾಟವಿದು*

ಮೇಕೆದಾಟು ಹೋರಾಟ ಕಾಂಗ್ರೆಸ್ ರೂಪಿಸಿದ ಹೋರಾಟ, ಇದರಲ್ಲಿ ಚಿತ್ರರಂಗದವರು ಹೇಗೆ ಭಾಗವಹಿಸಲು ಸಾಧ್ಯ ಎಂಬ ಪ್ರಶ್ನೆಗಳ ಬಗ್ಗೆ ಕೇಳಿದಾಗ, “ರಾಜ್ಯದ ನೆಲ, ಜಲ ಭಾಷೆ ರಕ್ಷಣೆಗೆ ಹೋರಾಟ ಮಾಡಬೇಕು. ಹಾಗಾದರೆ ಕಳಸಾ- ಬಂಡೂರಿ ಹೋರಾಟಕ್ಕೆ ಚಿತ್ರರಂಗದವರು ಏಕೆ ಹುಬ್ಬಳ್ಳಿಗೆ ಹೋದರು? ರಾಜಕುಮಾರ್ ಅವರು ಪಕ್ಷ ಬೇಧ ಮರೆತು ಹೋರಾಟಕ್ಕೆ ಏಕೆ ಬರುತ್ತಿದ್ದರು? ಹಾಗಾದರೆ ಈಗಿನ ಚಿತ್ರರಂಗದ ಜವಾಬ್ದಾರಿ ಏನು? ರಾಜಕುಮಾರ್ ಅವರು ಇವರಿಗೆ ಮಾದರಿ ಅಲ್ಲವೇ ಎಂದು ಪ್ರಶ್ನಿಸಿದರು.

ದುನಿಯಾ ವಿಜಯ್, ಪ್ರೇಮ್, ಸಾಧು ಕೋಕಿಲ, ಸಾ.ರಾ. ಗೋವಿಂದು ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೇ? ನನ್ನ ಮನೆಗೆ ನೀರು ತರಲು ಹೋರಾಟ ಮಾಡಲಿಲ್ಲ. ಇಡೀ ಬೆಂಗಳೂರಿಗೆ ನೀರು ತರಲು ಹೋರಾಟ ಮಾಡಿದ್ದೇವೆ. ಬೆಂಗಳೂರಲ್ಲಿ ಚಿತ್ರರಂಗದವರೂ ಇದ್ದಾರೆ. ಬರೀ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ. ಚಿತ್ರಂಗದವರು ಬರದೇ ಇದ್ದರೂ ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ಯಾರ್ಯಾರದ್ದು ಏನೆನಿದೆ ಎಂದು ನನಗೆ ತಿಳಿದಿಲ್ಲವೇ? ಇನ್ನಾದರೂ ಬುದ್ದಿ ಕಲಿಯಿರಿ ಎಂದಷ್ಟೇ ಹೇಳುತ್ತಿದ್ದೇನೆ. ತಗೊಳ್ಳೋದು ಬಿಡೋದು ಅವರಿಗೆ ಬಿಟ್ಟದ್ದು” ಎಂದರು.

*ಅಧಿಕಾರ ದರ್ಪ ಇದ್ದ ಕಾರಣಕ್ಕೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು*

ಅಧಿಕಾರದ ದರ್ಪದಿಂದ ಹೀಗೆ ಹೇಳಿದ್ದಾರೆ ಎನ್ನುವ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಹೇಳಿಕೆ ಬಗ್ಗೆ ಕೇಳಿದಾಗ, ರಾಜೇಂದ್ರ ಸಿಂಗ್ ಬಾಬು ನನ್ನ ಗೆಳೆಯ. ಅವರನ್ನು ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅಧಿಕಾರ ದರ್ಪ ಇದ್ದ ಕಾರಣಕ್ಕೇ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದು. ಪಕ್ಷಕ್ಕೆ ಹಾಗೂ ಚಿತ್ರರಂಗಕ್ಕೆ ಸಹಾಯ ಮಾಡಲಿ ಎಂದು ಅವರಿಗೆ ಸ್ಥಾನ ನೀಡಲಾಗಿತ್ತು. ಇದಾದ ನಂತರ ಅವರು ಒಂದು ದಿನವೂ ಪಕ್ಷದ ಕೆಲಸಕ್ಕೆ ಬರಲಿಲ್ಲ. ದರ್ಪ ಸುಮ್ಮನೆ ಬರುವುದಿಲ್ಲ. ಜನರು ಕೊಟ್ಟ ಅಧಿಕಾರದಿಂದ ಬರುತ್ತದೆ. ಆ ಅಧಿಕಾರದಿಂದಲೇ ರಾಜೇಂದ್ರ ಸಿಂಗ್ ಬಾಬು ಅವರಂಥವರಿಗೆ ಅಧಿಕಾರ ಕೊಟ್ಟಿದ್ದದ್ದು” ಎಂದು ಹೇಳಿದರು.

“ನನಗೆ ಯಾವುದೇ ರೀತಿಯ ವರ್ಣನೆಯ ಅಗತ್ಯವಿಲ್ಲ. ಚಿತ್ರರಂಗದವರ ಉತ್ತಮ ವೇದಿಕೆಯನ್ನು, ಬದುಕು, ಬೆಳವಣಿಗೆಯನ್ನು ಅವರೇ ಉಳಿಸಿಕೊಳ್ಳಬೇಕಲ್ಲವೇ? ಶಿವಕುಮಾರ್, ಸಿದ್ದರಾಮಯ್ಯ ಅವರ ಮನೆ ಕಾರ್ಯಕ್ರಮಕ್ಕೆ ಬರಬೇಡಿ. ನಿಮ್ಮ ಕಾರ್ಯಕ್ರಮ, ನೀವು ಕಾರ್ಯಕ್ರಮಕ್ಕೆ ಬಂದು ಉಳಿಸಿ, ಬೆಳೆಸಿಕೊಂಡು ಹೋಗಿ ಎಂದು ಹೇಳಿದ್ದೇನೆ. ಎಲ್ಲಾ ಸೇರಿ ಸಂಘಟನೆ ಆಗಬೇಕಲ್ಲವೇ?” ಎಂದು ಹೇಳಿದರು.

*ಹೊಸ ಭಾಷೆ ಕಲಿಸಿಕೊಡಲಿ*

ನಟ್ಟು- ಬೋಲ್ಟ್ ಪದ ಶಿವಕುಮಾರ್ ಅವರ ಸಂಸ್ಕಾರ ತೋರಿಸುತ್ತದೆ ಎನ್ನುವ ನಾಗಾಭರಣ ಮಾತಿನ ಬಗ್ಗೆ ಕೇಳಿದಾಗ, “ನನ್ನ ಹಳ್ಳಿ ಭಾಷೆಯಲ್ಲಿ ಉತ್ತರ ನೀಡಿದ್ದೇನೆ. ಅವರ ಬಳಿ ಹೊಸ ಭಾಷೆಯಿದ್ದರೆ ಕಲಿಸಿಕೊಡಲಿ, ಅದೇ ರೀತಿ ಮಾತನಾಡುತ್ತೇನೆ” ಎಂದು ತಿವಿದರು.

ಸರಿಯಾಗಿ ಆಹ್ವಾನ ನೀಡಿಲ್ಲ ಎಂದು ನಾಗಭರಣ ಹೇಳಿದ್ದರ ಬಗ್ಗೆ ಕೇಳಿದಾಗ, “ಆಹ್ವಾನ ನೀಡದೇ ಇದ್ದರೇ ತಪ್ಪು. ಇದು ಬೇರೆ ವಿಚಾರ. ಮನೆ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಬೇಕಲ್ಲವೇ? ಟೀಕೆ ಮಾಡಲಿ, ಬಯ್ಯಲಿ, ಹೋರಾಟ ಮಾಡಲಿ, ಜೈಕಾರ ಕೂಗಲಿ. ತಲೆ ಕೆಡಿಕೊಳ್ಳುವುದಿಲ್ಲ, ಅದು ನನಗೆ ಸಂತಸದ ವಿಚಾರವೇ” ಎಂದರು.

*ಚಿತ್ರರಂಗ ಸಾಯುತ್ತಿದೆ*

“ನಾನು ಸಹ ಸಿನಿಮಾ ರಂಗದಿಂದಲೇ ಬಂದವನು. ಇಂದು ಕನ್ನಡ ಚಿತ್ರರಂಗ ಸಾಯುತ್ತಿದೆ. ಹೊಸ ಸಿನಿಮಾಗಳು ಬರುತ್ತಿಲ್ಲ. ನಾನು ಇದೇ ರಂಗಕ್ಕೆ ಸೇರಿದವನು. ಈ ಹಿಂದೆ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಈಗ ನಮ್ಮ ಒಡೆತನದ 23 ಸಿನಿಮಾ ಪ್ರದರ್ಶನ ಪರದೆಗಳು ಬೆಂಗಳೂರಿನಲ್ಲಿವೆ” ಎಂದು ಹೇಳಿದರು.

“ನಮ್ಮ ಕನ್ನಡ ಚಿತ್ರರಂಗ ಇತ್ತೀಚೆಗೆ ಒಂದೆರಡು ಸಿನಿಮಾಗಳಿಂದ ಬಾಲಿವುಡ್ಗಿಂತ ಕೊಂಚ ಎತ್ತರಕ್ಕೆ ಬೆಳೆದಿದೆ. ಚಿತ್ರಗಳ ಗುಣಮಟ್ಟ ಹಾಲಿವುಡ್ ಗುಣಮಟ್ಟಕ್ಕೆ ಬೆಳೆಯುತ್ತಿದೆ. ಒಂದಷ್ಟು ಜನ ಇದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಈ ಹೆಜ್ಜೆ ಗುರುತುಗಳು ಉಳಿಯಬೇಕು, ಇನ್ನೂ ಎತ್ತರಕ್ಕೆ ಚಿತ್ರರಂಗವನ್ನು ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಉದ್ದೇಶ ಮತ್ತು ಆಶಯವಾಗಿದೆ” ಎಂದರು.

“ಮುಂದಿನ ವರ್ಷ ಬೆಂಗಳೂರಿನಲ್ಲಿ ಐಫಾ (ಐಐಎಫ್ ಎ) ಪ್ರಶಸ್ತಿ ನೀಡುವ ಕುರಿತು ಆಲೋಚನೆ ಮಾಡಿದ್ದೇನೆ. ಇದರ ಬಗ್ಗೆ ಈಗಾಗಲೇ ಎರಡು ಸುತ್ತಿನ ಮಾತುಕಥೆ ನಡೆದಿದೆ. ಪ್ರಶಸ್ತಿ ನೀಡುವ ತಂಡ ಈಗಾಗಲೇ ಬಂದು ನನ್ನ ಬಳಿ ಮಾತುಕಥೆ ನಡೆಸಿದೆ. ಇತ್ತೀಚೆಗೆ ಅಬುದಾಬಿಗೆ ಹೋದಾಗಲೂ ಚರ್ಚೆ ನಡೆಸಿದ್ದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೆ.ಎನ್.ರಾಜಣ್ಣ ಅವರ ಮಾರ್ಗದರ್ಶನದಲ್ಲಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ‌ ಚುನಾವಣೆ: ಡಿಸಿಎಂ ಡಿ.ಕೆ.ಶಿವಕುಮಾರ್:

ಬೆಂಗಳೂರು :
“ಸಚಿವ ಕೆ.ಎನ್.ರಾಜಣ್ಣ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮಾರ್ಗದರ್ಶನದಲ್ಲಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ನಡೆಸಲಾಗುವುದು. ಅಪೆಕ್ಸ್ ಬ್ಯಾಂಕ್ ಉಳಿಸುವುದು ನಮ್ಮ ಉದ್ದೇಶ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಸಂಬಂಧ ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಕೆಲವು ಮಂತ್ರಿಗಳು ಹಾಗೂ ಶಾಸಕರ ಸಭೆ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು.

ರಾಜಣ್ಣ ಅವರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದು, ಸಭೆಗೆ ಗೈರು ಹಾಜರಾಗಿದ್ದರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಕೆ.ಎನ್.ರಾಜಣ್ಣ ಅವರಿಗೆ ಅನಾರೋಗ್ಯದ ಕಾರಣಕ್ಕೆ ಸಭೆಗೆ ಬರಲು ಆಗಲಿಲ್ಲ. ವಿಧಾನಸಭೆಯಲ್ಲಿ ಅವರು ಇದ್ದರು ಎಂದು ಕೇಳಲ್ಪಟ್ಟೆ. ನಮಗೆಲ್ಲಾ ವಯಸ್ಸಾಗಿದೆ, ನನಗೂ ಕತ್ತು ನೋವು ಬಂದಿದೆ. ಇದೆಲ್ಲಾ ಈ ವಯಸ್ಸಿನಲ್ಲಿ ಸರ್ವೇ ಸಾಮಾನ್ಯ.” ಎಂದರು.

“ಮುಖ್ಯಮಂತ್ರಿಗಳು, ನಾನು ಹಾಗೂ ಕೆಲವು ಸಚಿವರು ಸೇರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತೀರ್ಮಾನ ಮಾಡಲಾಗಿದೆ” ಎಂದರು.