
ಬೆಳಗಾವಿ: ಗಡಿ ವಿವಾದದ ವಿಷಯ ಇದೆ ಎಂದು ಆರೋಪಿಸಿ ಪಾಲೋವರ್ ಎಂಬ ಚಲನಚಿತ್ರ ಪ್ರದರ್ಶನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಶುಕ್ರವಾರ ರಾತ್ರಿ ನಗರದ ಐನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ತಡೆಯೊಡ್ಡಿದ ಪ್ರಸಂಗ ನಡೆದಿದೆ.
ಶುಕ್ರವಾರ ರಾತ್ರಿ ಎಂಟಕ್ಕೆ ಇದರ ಮೊದಲ ಪ್ರದರ್ಶನ ನಡೆದಿತ್ತು. ಚಲನಚಿತ್ರದಲ್ಲಿ ಮುಖ್ಯವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿಷಯ ವಿವರಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಬಿಇ ಪದವೀಧರ ಹರ್ಷದ್ ನಲವಡೆ ಎಂಬುವವರು ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಹಿಂದೆ ಅಳವಡಿಸಿದ್ದ ಯಳ್ಳೂರು ಮಹಾರಾಷ್ಟ್ರ ರಾಜ್ಯ ಎಂಬ ಫಲಕವನ್ನು ಸಿನಿಮಾದ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ಮಂದಿರದ ಸಿಬ್ಬಂದಿ ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಆರೋಪವನ್ನು ತಳ್ಳಿ ಹಾಕಿದ ಚಿತ್ರತಂಡದವರು ನಾವು ಕನ್ನಡಿಗರೇ ಆಗಿದ್ದೇವೆ. ಇದರಲ್ಲಿ ಗಡಿ ವಿವಾದದ ಯಾವುದೇ ವಿಷಯ ಇಲ್ಲ. ಏಳು ವರ್ಷಗಳ ಕಾಲ ಕಷ್ಟಪಟ್ಟು ಚಲನಚಿತ್ರವನ್ನು ನಿರ್ಮಿಸಿದ್ದೇವೆ. ಹೋರಾಟಗಾರರು ಮೊದಲು ಚಲನಚಿತ್ರ ವೀಕ್ಷಣೆ ಮಾಡಿ ನಂತರ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.
ಖಡೇಬಜಾರ್ ಎಸಿಪಿ ಶೇಖರಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು. ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನ ರದ್ದುಗೊಂಡ ಕಾರಣಕ್ಕೆ ಪ್ರೇಕ್ಷಕರ ಹಣವನ್ನು ಮರಳಿಸಲಾಯಿತು.