ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕಿನ ನೀರ್ಕೆರೆ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಕೆ. ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ದೊರೆತಿದೆ.

ಮೂಲತಃ ಬೈಂದೂರಿನವರಾದ ಯಮುನಾ ಅವರು ಬೈಂದೂರಿನಲ್ಲಿ ಆರು ವರ್ಷ, ಕೆಸರ್ ಗದ್ದೆ ಶಾಲೆಯಲ್ಲಿ 17 ವರ್ಷ ಮತ್ತು ನೀರ್ಕೆರೆ ಶಾಲೆಯಲ್ಲಿ 13 ವರ್ಷಗಳಿಂದ ಒಟ್ಟಾರೆ 36 ವರ್ಷಗಳಿಂದ ಶಿಕ್ಷಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸೆಪ್ಟೆಂಬರ್ ಐದರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಪ್ರಶಸ್ತಿ ದೊರೆತಿರುವುದಕ್ಕೆ ಪ್ರತಿಕ್ರಿಯೆ :
ಮೂಡುಬಿದ್ರೆ ತಾಲೂಕು ತೆಂಕಮಿಜಾರು ಗ್ರಾಮದ ಸ.ಹಿ.ಪ್ರಾ.ಶಾಲೆ ನೀರ್ಕೆರೆಯಲ್ಲಿ 13 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 2012 ರಲ್ಲಿ ಈ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಸೇರ್ಪಡೆಗೊಂಡಾಗ ಕಂಡು ಬಂದ ಬಹಳಷ್ಟು ಕೊರತೆ ಹಾಗೂ ಅವ್ಯವಸ್ಥೆಗಳನ್ನು ಸವಾಲಾಗಿ ತೆಗೆದುಕೊಂಡು ಶತಪ್ರಯತ್ನದಿಂದ ‘ಈ ಶಾಲೆಯನ್ನು ಉನ್ನತಮಟ್ಟಕ್ಕೇರಿಸುವಲ್ಲಿ ಶ್ರಮಿಸಿದ್ದೇನೆ. ಮಾಸಿದ ಗೋಡೆ, ಗುಂಡಿ ಬಿದ್ದ ನೆಲ, ಸೋರುವ ಮಾಡು, ತರಗತಿ ಕೊಠಡಿ, ಶೌಚಾಲಯ, ಪೀಠೋಪಕರಣಗಳ ಕೊರತೆಯನ್ನು ದಾನಿಗಳು, ಹಳೆವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಇಲಾಖೆ ಹೀಗೆ ಎಲ್ಲರ ಸಹಕಾರದಿಂದ ನೀಗಿಸಲು ಪ್ರಯತ್ನಿಸಿದ್ದೇನೆ. ತರಗತಿ ಕೊಠಡಿಗಳು, ಶೌಚಾಲಯ,ಪೀಠೋಪಕರಣಗಳನ್ನು ಒದಗಿಸಿಕೊಳ್ಳುವುದರೊಂದಿಗೆ ವಾಟರ್ ಫಿಲ್ಟರ್, ಕಂಪ್ಯೂಟರ್ಸ್ ಸ್ಮಾರ್ಟ್ ಕ್ಲಾಸ್, ಪ್ರಿಂಟಸ್ ಲ್ಯಾಪ್‌ಟಾಪ್,ಗ್ರಂಥಾಲಯ ಕೊಠಡಿ, ರಂಗಮಂದಿರ, ಭಾಷಾ ಪ್ರಯೋಗಾಲಯ, ಶಾಲಾ ಅಂಗಳಕ್ಕೆ ಇಂಟರ್‌ಲಾಕ್ ಹಾಗೂ ಶೌಚಾಲಯ ಇತ್ಯಾದಿಗಳನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದೆ. ನಮ್ಮ ಹಳ್ಳಿಯ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯಲಿ ಎಂಬ ಸದುದ್ದೇಶದಿಂದ ಅಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾದೆವು. ಪ್ರತಿಭಾ ಕಾರಂಜಿ, ಹಾಗೂ ಕ್ರೀಡೆಗಳಿಗೆ ಉತ್ತಮ ತರಬೇತಿಯನ್ನು ನೀಡಲಾಗಿದ್ದು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.ತತ್ಪರಿಣಾಮ ಪ್ರಸ್ತುತ ವರ್ಷದಲ್ಲಿ 340 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.